ಕಾಂಕ್ರೀಟ್ ಪಿಚ್ ನಿರ್ಮಿಸುವ ಭರವಸೆ

bhr cricket
ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಆಯೋಜಿಸಿದ್ದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ ಬೆಂಗಳೂರಿನ ಗಟ್ಸ್ ಆ್ಯಂಡ್ ಗ್ಲೋರಿ ತಂಡ ಅತಿಥಿಗಳಿಂದ ಟ್ರೋಫಿ ಪಡೆಯಿತು. ಜಗದೀಶ್ ಅರಳೀಕೊಪ್ಪ, ಎ.ಎಸ್.ಕೃಷ್ಣಪ್ಪ, ಪೂರ್ಣೇಶ್, ಮಂಜು ಕೋಟ್ಯಾನ್, ಸ್ನೇಹಾ ಗೌಡ ಇತರರಿದ್ದರು.
Published on

ಬಾಳೆಹೊನ್ನೂರು: ಪಟ್ಟಣದ ಕಲಾರಂಗ ಕ್ರೀಡಾಂಗಣಕ್ಕೆ ಮುಂದಿನ ಮೂರು ತಿಂಗಳಲ್ಲಿ ಸ್ವಂತ ಖರ್ಚಿನಿಂದ ಕಾಂಕ್ರೀಟ್ ಪಿಚ್ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಭರವಸೆ ನೀಡಿದರು.

ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಆಯೋಜಿಸಿದ್ದ ಟಿ10 ಮತ್ತು ಟಿ20 ರಾಜ್ಯಮಟ್ಟದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಸಾವಿರಾರು ಕ್ರೀಡಾಪಟುಗಳು ಇದ್ದಾರೆ. ಆದರೆ ಇಲ್ಲಿ ಸೂಕ್ತ ಕ್ರೀಡಾಂಗಣ ಇಲ್ಲ. ಜನಪ್ರತಿನಿಧಿಗಳಿಗೆ ಕ್ರೀಡಾಂಗಣ ಅಭಿವೃದ್ಧಿಗೊಳಿಸುವ ಇಚ್ಛಾಶಕ್ತಿ ಇಲ್ಲ ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಕಲಾರಂಗ ಕ್ರೀಡಾಂಗಣದ ಅಭಿವೃದ್ಧಿಗೆ ಗ್ರಾಪಂ ಬದ್ಧವಿದೆ. ಇರುವ ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಗ್ರಾಪಂ ಸಹಕಾರ ನೀಡಲಿದೆ. ಈ ಹಿಂದೆ ಕ್ರೀಡಾಂಗಣ ವಿಸ್ತರಣೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ ಕ್ರೀಡಾಂಗಣದ ಪಕ್ಕದಲ್ಲಿರುವ ರಸ್ತೆಯು ಸರ್ಕಾರಿ ದಾಖಲೆಗಳ ಪ್ರಕಾರ ವಸ್ತಾರೆ-ಶೃಂಗೇರಿ ಮುಖ್ಯರಸ್ತೆ ಎಂದಿರುವ ಕಾರಣ ವಿಸ್ತರಣೆಗೆ ಅಡ್ಡಿಯಾಗಿ ಕೈಬಿಡಲಾಯಿತು. ಕ್ರೀಡಾಂಗಣದ ಸ್ವಚ್ಛತೆ, ನಿರ್ವಹಣೆಗೆ ಗ್ರಾಪಂ ಕ್ರೀಡಾಪಟುಗಳಿಗೆ ಕಾಲಕಾಲಕ್ಕೆ ಸೂಕ್ತ ಸಹಕಾರ ನೀಡಲಿದೆ ಎಂದು ತಿಳಿಸಿದರು.

ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳಿಂದ ಕ್ರೀಡಾಪಟುಗಳಿಗೆ ಹೆಚ್ಚಿನ ಸಂತಸ ದೊರೆಯಲಿದೆ. ಕ್ರೀಡಾಕೂಟಗಳನ್ನು ನಡೆಸಲು ಸಾಕಷ್ಟು ಸಿದ್ಧತೆ ಬೇಕಿದೆ. ಬಿಸಿಬಿ ಕ್ರಿಕೆಟ್ ತಂಡ ಉತ್ತಮ ವ್ಯವಸ್ಥೆಯೊಂದಿಗೆ ಪಂದ್ಯಾಟಗಳನ್ನು ಆಡಿಸಿದೆ ಎಂದರು.

ಟಿ20 ಪಂದ್ಯಾವಳಿಯಲ್ಲಿ ಬೆಂಗಳೂರಿನ ಗಟ್ಸ್ ಆ್ಯಂಡ್ ಗ್ಲೋರಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿ ಬಿಸಿಬಿ ಕಪ್ ಅನ್ನು ತನ್ನದಾಗಿಸಿಕೊಂಡಿತು. ಹೇರೂರು ಡಿಸಿಸಿ ತಂಡ ರನ್ನರ್ಸ್‌ ಸ್ಥಾನ ಗಳಿಸಿತು. ಟಿ10 ಪಂದ್ಯಾವಳಿಯಲ್ಲಿ ಹೇರೂರು ಡಿಸಿಸಿ ತಂಡ ಚಾಂಪಿಯನ್ ಸ್ಥಾನ ಗಳಿಸಿದ್ದು, ಕಡಬಗೆರೆ ಕ್ರಿಕೆಟರ್ಸ್‌ ರನ್ನರ್ಸ್‌ ಸ್ಥಾನ ಗಳಿಸಿತು. ಹಿರಿಯ ಆಟಗಾರರಿಗೆ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಅನಿಲ್ ಕುಲಾಸೋ ನಾಯಕತ್ವದ ತೆಂಗಿನಮನೆ ಕ್ರಿಕೆಟರ್ಸ್‌ ಚಾಂಪಿಯನ್, ಒ.ಡಿ.ಸ್ಟೀಫನ್ ನಾಯಕತ್ವದ ಬಾಳೆಹೊನ್ನೂರು ಲೆಜೆಂಡ್ಸ್ ತಂಡ ರನ್ನರ್ ಸ್ಥಾನ ಪಡೆಯಿತು.

ಪಂದ್ಯಾವಳಿಯ ಆಯೋಜಕ ಜಗದೀಶ್ ಅರಳೀಕೊಪ್ಪ, ಪ್ರಮುಖರಾದ ಎಂ.ವಿ.ಶ್ರೀನಿವಾಸಗೌಡ, ಎ.ಎಸ್.ಕೃಷ್ಣಪ್ಪ, ಪೂರ್ಣೇಶ್, ಮಂಜು ಕೋಟ್ಯಾನ್, ಸ್ನೇಹಾ ಗೌಡ, ಸತೀಶ್ ಅರಳೀಕೊಪ್ಪ, ಕೌಶಿಕ್ ಪಟೇಲ್, ಎಸ್.ಎನ್.ನಾರಾಯಣ, ವಿನಯ್, ಜಂಶೀದ್ ಅಹ್ಮದ್, ದಿನೇಶ್ ತುಪ್ಪೂರು, ಎಚ್.ಜೆ.ರಚನ್, ಗುರುಪ್ರಸಾದ್, ಸುರೇಶ್, ಇಬ್ರಾಹಿಂ ಶಾಫಿ, ಸಂದೇಶ್, ಕೆ.ಪಿ.ಚಂದ್ರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net