‘ಕಹಾನಿ’ ಕತೆ ಇಂಗ್ಲಿಷ್‌ನಲ್ಲಿದ್ದರೂ ಕನ್ನಡದೊಂದಿಗೆ ಬೆಸೆದಿದೆ

mysore
Published on

ಮೈಸೂರು: ನಗರದ ಇಂಜಿನಿಯರಿಂಗ್ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ.ಕೆ.ಕಾರ್ತಿಕ್ ಅವರ ‘ಕಹಾನಿ’ ಪುಸ್ತಕ ಬಿಡುಗಡೆಗೊಂಡಿತು.

ಚಲನಚಿತ್ರ ನಿರ್ದೇಶಕ ಮಂಸೋರೆ ಮಾತನಾಡಿ, ಈ ಕೃತಿಯಲ್ಲಿ ಅನುಭವ ಹೇರಳವಾಗಿದೆ. ಇಂಗ್ಲಿಷ್‌ನಲ್ಲಿ ಕತೆಗಳನ್ನು ಬರೆದಿದ್ದರೂ ಕನ್ನಡ ಭಾಷೆಯೊಂದಿಗೆ ಬೆಸೆದುಕೊಂಡಿದೆ. ಕಾರ್ತಿಕ್ ಅವರ ಕತೆಗಳು ಬದುಕಿನಲ್ಲಿ ಭರವಸೆ ಮೂಡಿಸುತ್ತವೆ. ಜೀವನಕ್ಕೆ ಬೇಕಾದ ಮುಖ್ಯವಾದ ಕತೆಗಳನ್ನು ಬರೆದಿದ್ದಾರೆ ಎಂದರು.

20 ಕತೆಗಳಲ್ಲೂ ಭರವಸೆ ಇದೆ. ಕತೆಗಳನ್ನು ಓದುವಾಗ ಕಿರುಚಿತ್ರ ನೋಡಿದಂತೆ ಅನಿಸಿತು. ಎಲ್ಲ ಕತೆಯೂ ಗಾಢವಾಗಿವೆ. ನಮಗೆ ಗೊತ್ತಿಲ್ಲದ್ದನ್ನು ಬರೆಯದೆ, ವಿದ್ವತ್ ಪಾಠ ಮಾಡದೆ ನಮ್ಮ ಸುತ್ತಮುತ್ತಲಿನ ಜಗತ್ತಿಗೆ ಚೌಕಟ್ಟು ಹಾಕಿ ಕತೆ ನಿರೂಪಿಸಿದ್ದಾರೆ. ಸಾಹಿತ್ಯ ಮತ್ತು ಪತ್ರಿಕೋದ್ಯಮ ಸಮಾನಾಂತರವಾಗಿ ಸಂಗಮಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸಬರ ಕೃತಿಗಳನ್ನು ಹೆಚ್ಚು ಓದುತ್ತಿರುತ್ತೇನೆ. ಆ ಕೃತಿಗಳಲ್ಲಿ ತಮ್ಮ ಅನುಭವಕ್ಕೆ ದಕ್ಕಿದ್ದನ್ನು ಬರೆಯುವುದಕ್ಕಿಂತ ಗಹನವಾದದ್ದು ಏನನ್ನೋ ಬರೆದಿರುತ್ತಾರೆ. ದೊಡ್ಡ ವಿಷಯ ಬರೆದರೆ ದೊಡ್ಡ ಲೇಖಕರಾಗುತ್ತೇವೆ ಎನಿಸಿಕೊಳ್ಳುವ ಬಯಕೆ ಕಾಣುತ್ತದೆ. ಅಂತಹ ಕೃತಿಗಳಲ್ಲಿ ಅನುಭವ ಕಡಿಮೆ ಇರುತ್ತದೆ.

ಆದರೆ, ಈ ಕೃತಿಯಲ್ಲಿ ಅನುಭವ ಹೇರಳವಾಗಿದೆ ಎಂದರು.

ಕಾರ್ತಿಕ್ ಅವರ ತಂದೆ ಆಸ್ಪತ್ರೆಯಲ್ಲಿದ್ದಾಗ ಈ ಕತೆಗಳನ್ನು ಬರೆದಿದ್ದಾರೆ. ಈ ಪುಸ್ತಕ ಓದುವಾಗ ನಮ್ಮ ತಂದೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ದಿನಗಳು ನೆನಪಿಗೆ ಬಂದವು. ಕಾರ್ತಿಕ್ ಕತೆ ಬರೆದರೆ, ನಾನು ಪೇಂಟಿಂಗ್ ಮಾಡುತ್ತಿದೆ. ಆಸ್ಪತ್ರೆಯ ದಿನಗಳು ಭಯ, ಆತಂಕ, ದುಗುಡ ತರುತ್ತವೆ. ಈ ಕೃತಿಯನ್ನು ಓದುವಾಗ ನನ್ನದೇ ಜೀವನ ನೋಡಿಕೊಂಡಾಯಿತು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ಸಣ್ಣ ಕತೆಗಳನ್ನು ಶತ ಶತಮಾನದಿಂದ ಬರೆಯುತ್ತಿದ್ದಾರೆ. ಪತ್ರಕರ್ತನಾಗಿ ಕಾರ್ತಿಕ್ ಕತೆಗಳನ್ನು ಬರೆದಿದ್ದಾರೆ.

ಅದೇ ರೀತಿ ಎಲ್ಲರೂ ಕತೆಗಳನ್ನು ಬರೆಯಬೇಕು. ತಮ್ಮ ಅನುಭವ ದಾಖಲಿಸಬೇಕು. ಪತ್ರಿಕೋದ್ಯಮದವೇ ಬೇರೆ. ಸಾಹಿತ್ಯ ಕೃತಿಯೇ ಬೇರೆ. ಪುಸ್ತಕ ಬರೆಯುವಾಗ ವಿಷಯ ಅರ್ಥ ಮಾಡಿಕೊಳ್ಳಬೇಕು. ಸಮಾಜಕ್ಕೆ ಹತ್ತಿರವಾಗಿ ಆಲೋಚಿಸಬೇಕು. ಸಣ್ಣಕತೆ ಬರೆದಾಗ ಅಂತರಾಳ ಮುಖ್ಯ ಎಂದರು.

ಕಾರ್ತಿಕ್ ಅವರ ಕುಟುಂಬದ ಕಷ್ಟದ ದಿನಗಳನ್ನು ಹತ್ತಿರದಿಂದ ನೋಡಿದ್ದೇನೆ. ಆ ಸಂದರ್ಭವನ್ನು ಯಾವ ರೀತಿ ಎದುರಿಸಿದರು, ಅವರ ಮಾನಸಿಕ ಸ್ಥಿತಿಯ ಬಗ್ಗೆ ನೆನೆದರೆ ಹೆದರಿಕೆ ಆಗೋದು. ಕಾರ್ತಿಕ್ ನೋವಿನಲ್ಲೂ ಬರವಣಿಗೆ ಮಾಡಿದ್ದು ಬಹಳ ಒಳ್ಳೆಯ ಕೆಲಸ. ನೋವಿನಿಂದ ಕಾರ್ತಿಕ್ ಬಿಡುಗಡೆಗೆ ಸೃಜನಶೀಲವಾದ ಮಾರ್ಗ ಅಗತ್ಯವಾಗಿ ಬೇಕಿತ್ತು ಎಂದರು.

ಮೈಸೂರು ಸಾಹಿತ್ಯ ಉತ್ಸವದ ಸಂಸ್ಥಾಪಕ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಕೃತಿ ಕುರಿತು ಮಾತನಾಡಿದರು. ಲೇಖಕ ಕೆ.ಕೆ.ಕಾರ್ತಿಕ್ ಉಪಸ್ಥಿತರಿದ್ದರು. ಅಪೂರ್ವ ಕಿರಣ್ ಪ್ರಾರ್ಥಿಸಿದರು. ಹರಿಣಿ ಕಾರ್ತಿಕ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net