ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸರ್ಕಾರದ ನಿರ್ಧಾರ: ಕೆ. ಗೋಪಾಲಯ್ಯ

Published on

ಹಾಸನ: ಪಶ್ಚಿಮಘಟ್ಟ ಪ್ರದೇಶದ ಜಿಲ್ಲೆಗಳಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.


ಭರ್ತಿಯಾಗಿರುವ ಗೊರೂರಿನ ಹೇಮಾವತಿ ಜಲಾಶಯಕ್ಕೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ದೆಹಲಿಗೆ ಹೋಗಿದ್ದಾರೆ ಎಂದು ತಿಳಿಸಿದರು.


ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿರುವ ಮಾಹಿತಿ ಸರ್ಕಾರಕ್ಕೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ತೀರ್ಮಾನ ಕೈಗೊಂಡಿರುವುದರಿಂದ ಬಂದ್ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಚಿವರು ಬಾಗಿನ ಅರ್ಪಿಸುವಾಗ ಅಣೆಕಟ್ಟೆಯಿಂದ 11300 ಕ್ಯೂಸೆಕ್ ನೀರು ಹೊರಬಿಡಲಾಯಿತು. ಕಾರ್ಯಕ್ರಮ ಮುಗಿದ ನಂತರ ಹೊರ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಪಂ ಸಿಇಒ ಕಾಂತರಾಜು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಇಂಜಿನಿಯರ್ ಶಂಕರೇಗೌಡ, ಮುಖ್ಯ ಇಂಜಿನಿಯರ್ ಮಹೇಶ್, ಹೇಮಾವತಿ ಜಲಾಶಯ ಯೋಜನೆ ಅಧೀಕ್ಷಕ ಇಂಜಿನಿಯರ್ ನಳಿನಿ, ಕಾರ್ಯಪಾಲಕ ಇಂಜಿನಿಯರ್ ಯೋಗೀಶ್ ಇತರರು ಹಾಜರಿದ್ದರು.

ಶಿರಾಡಿ: ಪರ್ಯಾಯ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಬಿಡುಗಡೆ
ರಾಷ್ಟ್ರೀಯ ಹೆದ್ದಾರಿ 72ರ ಶಿರಾಡಿ ಘಾಟ್ ಮಾರ್ಗದಲ್ಲಿ ದೋಣಿಗಾಲ್ ಬಳಿ ಪರ್ಯಾಯ ರಸ್ತೆ ನಿರ್ಮಿಸಲು ಈಗಾಗಲೇ 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೆದ್ದಾರಿ ದುರಸ್ತಿ ಕಾಮಗಾರಿಯನ್ನೂ ತ್ವರಿತಗತಿಯಲ್ಲಿ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ವೈಜ್ಞಾನಿಕವಾಗಿ ಈ ಕಾರ್ಯ ಮಾಡಲಾಗುವುದು. ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅವರು ವರದಿ ನೀಡಿದ ನಂತರ ಅದನ್ನು ಒಪ್ಪಬೇಕೋ ಇಲ್ಲವೇ ತಿರಸ್ಕರಿಸಬೇಕೋ ಎಂಬುದನ್ನು ತೀರ್ಮಾನ ಮಾಡಲಾಗುವುದು. ಮೊದಲು ತಜ್ಞರ ವರದಿ ಕೈ ಸೇರಲಿ ಎಂದರು.

ಎತ್ತಿನಹೊಳೆ ಯೋಜನೆ ಕಾಮಗಾರಿ ಕೆಲವೆಡೆ ಕಳಪೆ ಆಗಿರುವ ಬಗ್ಗೆ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ನೀರಾವರಿ ಸಚಿವರೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದರು.

ಬಿಎಸ್‌ವೈ ದೊಡ್ಡ ನಾಯಕರು:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷದ ದೊಡ್ಡ ನಾಯಕರು, ರಾಜ್ಯಕ್ಕೆ ಅವರ ಅವಶ್ಯಕತೆ ಇದೆ. ಅವರು ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಪಕ್ಷದ ನೇತೃತ್ವ ವಹಿಸಲಿದ್ದಾರೆ. ಯಡಿಯೂರಪ್ಪ ಅವರ ಮೈಯಲ್ಲಿ ಎಲ್ಲಿಯವರೆಗೂ ಶಕ್ತಿ ಇರುತ್ತೋ, ಅಲ್ಲಿಯವರೆಗೂ ಅದನ್ನು ಪಕ್ಷಕ್ಕೆ ಧಾರೆ ಎರೆಯಬೇಕು ಎಂದು ಕೇಳಿಕೊಳ್ಳಲಾಗುವುದು ಎಂದು ಸಚಿವರು ಪ್ರತಿಕ್ರಿಯಿಸಿದರು.

ಬೃಂದಾವನ ನಿರ್ಮಾಣ
‘‘ಗೊರೂರು ಹೇಮಾವತಿ ಅಣೆಕಟ್ಟೆ ಮುಂಭಾಗ ಕೆಆರ್‌ಎಸ್ ಬೃಂದಾವನ ಮಾದರಿ ಉದ್ಯಾನವನ ನಿರ್ಮಿಸಲು ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಾಗುವುದು. ಈ ಯೋಜನೆ ಸರ್ಕಾರದ ಗಮನದಲ್ಲಿದೆ. ಬೃಂದಾವನ ಮಾದರಿ ಉದ್ಯಾನವನ ನಿರ್ಮಿಸುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ.’’

  • ಕೆ. ಗೋಪಾಲಯ್ಯ, ಜಿಲ್ಲಾ ಉಸ್ತುವಾರಿ ಸಚಿವ, ಹಾಸನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net