

ಕೊಡೇಕಲ್: ಹುಣಸಗಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಾಥಮಿಕ ಶಾಲಾ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕೊಡೇಕಲ್‌ನ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯದ ವಿದ್ಯಾರ್ಥಿನಿಯರು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ವಾಲಿಬಾಲ್‌ನಲ್ಲಿ ಪ್ರಥಮ, ಕಬಡ್ಡಿಯಲ್ಲಿ ದ್ವಿತೀಯ, ೪೦೦ ಮೀ. ರಿಲೇಯಲ್ಲಿ ಪ್ರಥಮ, ಅಥ್ಲೆಟಿಕ್ಸ್ ೨೦೦ ಮೀ. ಓಟದಲ್ಲಿ ಚೈತ್ರಾ, ಗುಂಡು ಎಸೆತದಲ್ಲಿ ಸೈನಾ, ಚಕ್ರ ಎಸೆತದಲ್ಲಿ ಗಂಗಾ ಪ್ರಥಮ, ೬೦೦ ಮೀ. ಓಟದಲ್ಲಿ ರಕ್ಷಿತಾ ದ್ವಿತೀಯ ಸ್ಥಾನ ಪಡೆದು ಪ್ರತಿಭೆ ಮೆರೆದಿದ್ದಾರೆ.
ವಸತಿನಿಲಯದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ದೈಹಿಕ ಶಿಕ್ಷಕಿ ರೇಣುಕಾ ಮತ್ತು ವಿಜೇತ ಮಕ್ಕಳನ್ನು ಅಭಿನಂದಿಸಲಾಯಿತು. ಪ್ರಾಚಾರ್ಯೆ ರಾಚಮ್ಮ ಪೂಜಾರಿ ಮಾತನಾಡಿ, ಶಿಕ್ಷಣ ಜತೆ ಆಟಕ್ಕೂ ಬಹಳ ಮಹತ್ವವಿದೆ. ದೈಹಿಕ ಶಿಕ್ಷಕಿ ರೇಣುಕಾ ಮುತುವರ್ಜಿ ವಹಿಸಿ ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗುವಂತೆ ಮಾಡುತ್ತಿರುವುದು ಸಂತೋಷದ ವಿಷಯ ಎಂದರು.
ಶಿಕ್ಷಕಿಯರಾದ ವಿಜಯಲಕ್ಷ್ಮೀ, ಈರಮ್ಮ, ಸಂಗೀತಾ, ಪರ್ವಿನ್, ರೇಣುಕಾ, ಶಕುಂತಲಾ, ಮೈತ್ರಾ, ಭಾಗ್ಯಶ್ರೀ, ಸಾವಿತ್ರಿ ಇದ್ದರು.