ಕಸಾಯಿಖಾನೆಗೆ ಸಾಗಿಸುತ್ತಿದ್ದ 12 ರಾಸುಗಳ ರಕ್ಷಣೆ, ಐವರ ಬಂಧನ

11 Nela Ph 06 Cows
Published on

ನೆಲಮಂಗಲ: ತಮಿಳುನಾಡಿನ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 12 ಹಸುಗಳನ್ನು ರಕ್ಷಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆಯ ನೂರ್‌ಪಾಷಾ (50), ಜಬ್ಬಿರ್ ಪಾಷಾ (26), ಬೆಂಗಳೂರಿನ ಶೇಷಾದ್ರಿಪುರಂನ ಮಂಜುನಾಥ್ (48) ಹಾಗೂ ಕ್ಯಾಂಟರ್ ಚಾಲಕ ಬಂಧಿತರು.

ಎಸ್‌ಐ ಎಚ್.ಟಿ.ವಸಂತ್ ನೇತೃತ್ವದ ತಂಡ ಶನಿವಾರ ತಡರಾತ್ರಿ ಗಸ್ತಿನಲ್ಲಿದ್ದಾಗ ರಾ.ಹೆದ್ದಾರಿ 4ರ ಹಾಸನ ಬೆಂಗಳೂರು ಮಾರ್ಗ ಮಧ್ಯದ ಹಂಚೀಪುರದ ಲ್ಯಾಂಕೊ ದೇವಿಹಳ್ಳಿ ಟೋಲ್ ಬಳಿ ಕಸಾಯಿ ಖಾನೆಗೆ ವಾಹನದಲ್ಲಿ ಹಸುಗಳನ್ನು ಸಾಗಿಸುತ್ತಿರುವುದನ್ನು ಗಮನಿಸಿದ್ದರು. ಈ ಬಗ್ಗೆ ವಿಚಾರಿಸಿದಾಗ, ಹಾಸನ ಜಿಲ್ಲೆಯ ಅರಕಲಗೂಡಿನಿಂದ ತಮಿಳುನಾಡಿನ ಕೃಷ್ಣಗಿರಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಿದ ಪೊಲೀಸರು, ಹಸುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡರು.

ರಕ್ಷಿಸಲಾದ ಹಸುಗಳನ್ನು ತಾಲೂಕಿನ ಗುರುವನಹಳ್ಳಿ ಬಳಿಯ ಶ್ರೀ ಪ್ರಭುಪಾದ ಗೋಶಾಲೆಗೆ ಬಿಡಲಾಯಿತು.

ಒಬ್ಬನ ಬಂಧನ: ಮಾಗಡಿಯ ಲಕ್ಕೇನಹಳ್ಳಿಯಿಂದ ನೆಲಮಂಗಲ ತಾಲೂಕಿನ ಇಸ್ಲಾಂಪುರ ಕಸಾಯಿಖಾನೆಗೆ ಸಾಗಿಸುತ್ತಿದ್ದ 2 ನಾಟಿ ಹಸು ಹಾಗೂ 2 ಹೋರಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ರಕ್ಷಿಸಿ ಒಬ್ಬನನ್ನು ಬಂಧಿಸಿದ್ದಾರೆ.

ಮಾಗಡಿ ತಾಲೂಕಿನ ಲಕ್ಕೇನಹಳ್ಳಿಯ ಲೋಕೇಶ್ (34) ಬಂಧಿತ. ರಾ.ಹೆ. 4ರ ಲ್ಯಾಂಕೊ ದೇವಿಹಳ್ಳಿ ಟೋಲ್ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಚಾಲಕನನ್ನು ವಿಚಾರಿಸಿದಾಗ ಕಸಾಯಿಖಾನೆಗೆ ಸಾಗಿಸುತ್ತಿರುವುದು ಗೊತ್ತಾಗಿತ್ತು. ಲೋಕೇಶ್‌ನನ್ನು ಬಂಧಿಸಿ, ವಾಹನ ವಶಕ್ಕೆ ಪಡೆದುಕೊಂಡರು. ರಕ್ಷಿಸಿದ ರಾಸುಗಳನ್ನು ಗುರುವನಹಳ್ಳಿ ಬಳಿಯ ಗೋಶಾಲೆಗೆ ಬಿಟ್ಟರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net