ಕಸಾಯಿಖಾನೆಗೆ ಸಾಗಿಸುತ್ತಿದ್ದ ಕರು ರಕ್ಷಣೆ

SRP Crime
Published on

ಶ್ರೀರಂಗಪಟ್ಟಣ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಕರುವನ್ನು ಪಟ್ಟಣ ಹೊರವಲಯದ ಕಾವೇರಿ ನದಿಯ ಎಡತಿಟ್ಟು ಸಮೀಪ ರೈತರು ರಕ್ಷಿಸಿ, ಯುವಕನೊಬ್ಬನನ್ನು ಹಿಡಿದು ಬುಧವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೈಸೂರು ಮೂಲದ ತೌಸೀಫ್ ಬಂಧಿತ ಆರೋಪಿ. ಮೈಸೂರಿನ ಉದ್ಯಮಿಯೊಬ್ಬರು ಎಡತಿಟ್ಟು ಪ್ರದೇಶದಲ್ಲಿ ಕೃಷಿ ಜಮೀನು ಖರೀದಿಸಿ ಇದರ ನಿರ್ವಹಣೆಗೆ ಕುಟುಂಬವನ್ನು ಸ್ಥಳದಲ್ಲಿ ನೇಮಿಸಿದ್ದಾರೆ. ಇಲ್ಲಿ ವಾಸವಿದ್ದ ಕುಟುಂಬದ ಯುವಕರು ವಾರದಲ್ಲಿ ಮೂರ್ನಾಲ್ಕು ಬಾರಿ ಕರುಗಳನ್ನು ತರುವುದು, ಬಳಿಕ ಅಲ್ಲಿಂದ ನಾಪತ್ತೆಯಾಗುವುದನ್ನು ರೈತರು ಗಮನಿಸಿದ್ದರು. ಇದರೊಂದಿಗೆ ಹಲವು ಬಾರಿ ಬೃಹತ್ ಪ್ಲಾಸ್ಟಿಕ್ ಚೀಲಗಳಲ್ಲಿ ವಸ್ತುಗಳಂತೆ ತುಂಬಿಕೊಂಡು ಬೈಕಿನಲ್ಲಿ ಮೈಸೂರು ಕಡೆಗೆ ಹೋಗುತ್ತಿರುವುದನ್ನೂ ಸಾಕಷ್ಟು ಸಾರಿ ಗಮನಿಸಿದ್ದರು.

ಬುಧವಾರ ಸಂಜೆ ಇದೇ ರೀತಿ ಕೊಂಡೊಯ್ಯುವಾಗ ಬೈಕ್ ಸವಾರನ ನಿಯಂತ್ರಣ ತಪ್ಪಿ ಉರುಳಿ ಬಿದ್ದಾಗ ಚೀಲದೊಳಗೆ ಹಗ್ಗದಿಂದ ಕಟ್ಟಿದ್ದ ಕರು ಪತ್ತೆಯಾಗಿದೆ. ಇದನ್ನು ಕಂಡ ಅಕ್ಕಪಕ್ಕದ ಜಮೀನುಗಳ ರೈತರು ಯುವಕರನ್ನು ಸುತ್ತುವರಿದು ಈ ಬಗ್ಗೆ ಪ್ರಶ್ನಿಸಿ ತರಾಟೆ ತೆಗದುಕೊಂಡಾಗ ಒಬ್ಬ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮತ್ತೊಬ್ಬ ಯುವಕ ತೌಸೀಫ್‌ನನ್ನು ಕರು ಸಮೇತ ಹಿಡಿದಿದ್ದಾರೆ.

ಈ ವೇಳೆ ಪಾಂಡವಪುರ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಿಂದ ಖರೀದಿಸಿ ತಂದು, ಮೈಸೂರಿನ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಯುವಕ ವಾಸವಿದ್ದ ಫಾರ್ಮ್ ಮಾಲೀಕರ ಗಮನಕ್ಕೆ ತಂದ ರೈತರು, ಅಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಮಾಲೀಕರು ತಿಳಿಸಿದ ಬಳಿಕ ಟೌನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net