

ಕಲಬುರಗಿ: ನಗರದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು ಮತ್ತು ಪ್ರಾಣಿ ಬಲಿ ನಡೆಯುವುದನ್ನು ಸಂಪೂರ್ಣವಾಗಿ ತಡೆ ಹಿಡಿಯಬೇಕು ಎಂದು ಆಗ್ರಹಿಸಿ ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿ, ಕಲಬುರಗಿಯಲ್ಲಿ ಪರವಾನಿಗೆ ಪಡೆದುಕೊಂಡಿರುವ ಕಸಾಯಿಖಾನೆಗಳು ಇಲ್ಲ ಎಂದು ಹೇಳಲಾಗಿದೆ. ಹೀಗಾಗಿ ಕೂಡಲೇ ನಗರದಲ್ಲಿರುವ ಎಲ್ಲ ಕಸಾಯಿಖಾನೆಗಳನ್ನು ಬಂದ್ ಮಾಡುವ ಮೂಲಕ ಪ್ರಾಣಿ ವಧೆ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಎಂಎಸ್ಕೆ ಮಿಲ್, ರೋಜಾ, ಮೊಮಿನಪುರ, ಮಿಜಗುರಿ, ನಂದೂರ ಕೈಗಾರಿಕೆ ಪ್ರದೇಶ ಇನ್ನಿತರ ಕಡೆಗಳಲ್ಲಿ ಅಕ್ರಮವಾಗಿ ದನಗಳನ್ನು ವಧೆ ಮಾಡುವ ಕೇಂದ್ರಗಳಿವೆ.ಇವು ಅಕ್ರಮವಾಗಿವೆ, ಅವನ್ನು ಮುಚ್ಚಿಸಬೇಕು, ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು, ಅಕ್ರಮವಾಗಿ ಗೋವುಗಳನ್ನು ಸಾಗಿಸುವುದನ್ನು ತಡೆಗಟ್ಟಬೇಕು. ಅವನ್ನು ಬಲಿ ಕೊಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಲ್ಲದೆ ಬಕ್ರೀದ್ ಹತ್ತಿರದಲ್ಲಿರುವುದರಿಂದ ಆಳಂದನಲ್ಲಿ ಒಂಟಿಗಳು ಪತ್ತೆಯಾಗಿವೆ. ಹೀಗಾಗಿ ಜಿಲ್ಲಾಧಿಕಾರಿ ಸಭೆ ನಡೆಸಿ ಪ್ರಾಣಿ ಹತ್ಯೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆ ಅಧ್ಯಕ್ಷ ಗುರುಶಾಂತ ಟೆಂಗಳಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂತೋಷ ಬೆನಕನಳ್ಳಿ, ಶಿವರಾವ ಬಾಳಿ, ಶ್ರೀಶೈಲ ಮೂಲಗೆ, ಸುನೇಶ ತಳವಾರ, ಕಿರಣ ಖೇಳಗಾಂವಕರ್, ಧನರಾಜ ದೊಗಡೆ, ಮಹೇಶ ಚವ್ಹಾಣ, ಶಿವು ಆಳಂದಕರ್, ಪ್ರಶಾಂತ ಬಂಡಗಾರ, ಅಶೋಕ ಮಠಪತಿ, ರಾಘು, ಮಲ್ಲು, ರೋಹಿತ, ಸಚಿನ್, ಶ್ರೀನಿವಾಸ, ಅರುಣಕುಮಾರ, ಪ್ರಭು ಮುಂಗಾರ, ಸಿದ್ದು ಶಿವಾಜಿ, ಶ್ರೀಶೈಲ ಡೆಂಗಿ, ಅಣವೀರ ಪಾಟೀಲ್, ಹಲವರು ಪಾಲ್ಗೊಂಡಿದ್ದರು.