

ಶೃಂಗೇರಿ: ಕನ್ನಡ ಸಾಹಿತ್ಯ ಪರಿಷತ್‌ನಿಂದ ನವೆಂಬರ್ ತಿಂಗಳಿಡೀ ಕನ್ನಡ ರಾಜ್ಯೋತ್ಸವ ಆಚರಿಸಲು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿದೆ.
ಕನ್ನಡ ಭವನದಲ್ಲಿ ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಅಧ್ಯಕ್ಷತೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಎರಡು ವರ್ಷದಿಂದ ಯಶಸ್ವಿಯಾಗಿ ನಡೆಯುತ್ತಿರುವ ನುಡಿ ನಿತ್ಯೋತ್ಸವವನ್ನು ಈ ವರ್ಷವೂ ಆಚರಿಸಲು ತೀರ್ಮಾನಿಸಿದ್ದು, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಚರಿಸಲಾಗುತ್ತದೆ.
ಸಭೆಯಲ್ಲಿ ಎಚ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಕನ್ನಡ ಭವನದಲ್ಲಿ ರಾಜೋತ್ಸವ ಪ್ರಯುಕ್ತ ಬೆಳಗ್ಗೆ 8 ಗಂಟೆಗೆ ಕನ್ನಡ ಧ್ವಜಾರೋಹಣ ನೆರವೇರಿಸಲಾಗುತ್ತದೆ. ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಿಂದ ಕಸಾಪ ಪೂರ್ವಾಧ್ಯಕ್ಷ ಎಚ್.ಎ.ಶ್ರೀನಿವಾಸ್ ಕಿಗ್ಗಾ ಮತ್ತು ಸಾಂಸ್ಕೃತಿಕ ಕ್ಷೇತ್ರದಿಂದ ಎಂ.ಎಸ್.ಜನಾರ್ದನ್ ಮಂಡಗಾರು ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ 125 ಅಂಕ ಗಳಿಸಿದ ಸರ್ಕಾರಿ ಪ್ರೌಢಶಾಲೆ ಹೊಳೆಕೊಪ್ಪ ಎನ್.ಸುಮೇಘಾ, ಜ್ಞಾನಭಾರತೀಯ ಬಿ.ವಿ.ರವಿಕೀರ್ತ ಹೆಬ್ಬಾರ್, ಎಂ.ಆರ್.ಸಾತ್ವಿಕ್, ವಿ.ಎಂ.ಸೌರಭ, ಆರ್.ಸ್ಫೂರ್ತಿ, ಜೇಸೀಸ್ ಪ್ರೌಢಶಾಲೆಯ ವರ್ಷಾ ವಿ. ಶೆಟ್ಟಿ, ದರ್ಶಿನಿ ಪ್ರೌಢಶಾಲೆಯ ಕೆ.ಎಸ್.ಅನ್ವಿತಾ, ಎಸ್.ಬಿಂದು, ಕೆ.ವಿ.ಮೇಘವಿ, ಎಚ್.ಡಿ.ತೇಜಸ್ ಹೆಗ್ಡೆ, ಕೆ.ಎಸ್.ನಿಶ್ಚಿತಾ, ಬಿಆರ್‌ವಿ ಪ್ರೌಢಶಾಲೆಯ ಕೆ.ಎನ್.ವರ್ಷಣಿ ಹಾಗೂ ಮುರಾರ್ಜಿ ಶಾಲೆಯ ಯು.ಎಚ್.ಅಂಕಿತಾ ಅವರನ್ನು ಪುರಸ್ಕರಿಸಲಾಗುವುದು ಎಂದರು.
ಕಸಾಪ ಪ್ರಧಾನ ಕಾರ್ಯದರ್ಶಿಗಳಾದ ಹೆಗ್ಗದ್ದೆ ಶಿವಾನಂದರಾವ್, ಸುನೀತಾ ನವೀನ ಗೌಡ, ಪದಾಧಿಕಾರಿಗಳಾದ ಉಳುವೆ ಶಿವಶಂಕರ್, ಎ.ಎಂ.ಶ್ರೀಧರರಾವ್, ಎ.ಎನ್.ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ಕಲಾವತಿ ರಮೇಶ್ ಇದ್ದರು.