

ಬಾಳೆಹೊನ್ನೂರು: ಕನ್ನಡ ಸಾಹಿತ್ಯ ಪರಿಷತ್ ಎನ್.ಆರ್.ಪುರ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದ ಬುತ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.
ಕಡ್ಲೇಮಕ್ಕಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಸಾಪ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ಶ್ರಾವಣ ಸಂಭ್ರಮ, ಪ್ರತಿಭಾ ಪುರಸ್ಕಾರ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಸಾಪ ತಾಲೂಕಿನಾದ್ಯಂತ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು, ಜಾನಪದ ಸಾಹಿತ್ಯದ ಉಳಿವಿಗಾಗಿ ಶ್ರಮಿಸುತ್ತಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಸಾಮಾನ್ಯ ಜ್ಞಾನದ ಕೊರತೆ ಬಾರದ ಹಾಗೆ ಜ್ಞಾನದ ಬುತ್ತಿ ನೀಡುವ ಅನೇಕ ಕಾರ್ಯಕ್ರಮಗಳನ್ನ ನಡೆಸುತ್ತಿದೆ. ಶ್ರಾವಣ ಮಾಸದಲ್ಲಿ ತಾಲೂಕಿನಾದ್ಯಂತ ಸಾಮಾನ್ಯ ಜ್ಞಾನ, ಜಾನಪದಕ್ಕೆ ಸಂಬಂಧಪಟ್ಟ ಒಗಟು, ಗಾದೆಗಳ ಕುರಿತು ರಸಪ್ರಶ್ನಾ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದರು.
ಉಪನ್ಯಾಸಕಿ ನಂದಿನಿ ಅವರು ಶ್ರಾವಣ ಮಾಸದ ಮಹತ್ವ, ಶ್ರಾವಣ ಮಾಸದಲ್ಲಿ ನಮ್ಮ ಜೀವನ ಶೈಲಿ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕವಯತ್ರಿ ಎ.ಆರ್.ಲತಾ ಅವರು ಬರೆದ ಮನದಾಳದ ಮೌನ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಧಾತ್ರಿ ಅವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಸಾಪ ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ್, ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ, ತಾಲೂಕು ಕಜಾಪ ಅಧ್ಯಕ್ಷ ಸತೀಶ್ ಅರಳೀಕೊಪ್ಪ, ಹೋಬಳಿ ಕಸಾಪ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ, ವಾಣಿ ನರೇಂದ್ರ, ಉಪನ್ಯಾಸಕರಾದ ಸುಮಿತಾ, ಮಾಲತಿ, ಉಜ್ವಲಾ, ರವಿಶಂಕರ್, ಲಯನ್ಸ್ ವಲಯಾಧ್ಯಕ್ಷ ಎಂ.ಡಿ.ಶಿವರಾಂ ಇತರರಿದ್ದರು.