ಕೊಳ್ಳೇಗಾಲ: ಪಟ್ಟಣದ ಕಸಾಪ ಕಚೇರಿಯಲ್ಲಿ ಶುಕ್ರವಾರ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತಾಲೂಕು ಕಸಾಪ ಸದಸ್ಯರು ಸಾಹಿತಿ ಎಸ್. ಎಲ್ ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿದರು. ಬಳಿಕ, ಕಸಾಪ ತಾಲೂಕು ಅಧ್ಯಕ್ಷ ಎಸ್. ನಾಗರಾಜು ಕೊಂಗರಹಳ್ಳಿ ಮಾತನಾಡಿ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ. ಭೈರಪ್ಪ ಅವರು 25ಕ್ಕೂ ಹೆಚ್ಚು ಕಾದಂಬರಿ ರಚಿಸಿ ಪ್ರಪಂಚಾದ್ಯಂತ ಕೀರ್ತಿ ಗಳಿಸಿದ್ದಾರೆ. ಬಡತನದ ಬೇಗೆಯಲ್ಲಿ ಬೆಂದು ಬೆಂಕಿಯಲ್ಲಿ ಅರಳಿದ ಹೂವಾಗಿದ್ದಾರೆ. ಸಾಕ್ಷಿ, ಉತ್ತರಕಾಂಡ, ನಾಯಿ ನೆರಳು ಹೀಗೆ ಇನ್ನೂ ಅನೇಕ ಕಾದಂಬರಿ ರಚಿಸಿದ್ದು ಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದರು. ಸಾಹಿತಿ ಮಹದೇವ ಶಂಕನಪುರ, ದೊಡ್ಡ ಲಿಂಗೇಗೌಡ, ಚನ್ನ ಮಾದೇಗೌಡ, ಲಯನ್ಸ್ ಸಂಸ್ಥೆಯ ಜಿ.ಎಂ ಪ್ರಸಾದ್, ಚನ್ನ ಮಾದೇಗೌಡ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶೇಖರ್, ನಿವೃತ್ತ ಡಿಡಿಪಿಐ ಮಂಜುನಾಥ್ ಇದ್ದರು.