

ದೇವದುರ್ಗ: ಕನ್ನಡ ಸಾಹಿತ್ಯ ಪರಿಷತ್ನಿಂದ ಆಯೋಜಿಸುವ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳುವ ಆಶಯದೊಂದಿಗೆ ಸದಸತ್ವ ಅಭಿಯಾನ ಆರಂಭಿಸಿದ್ದು, ಒಂದು ಕೋಟಿ ಕನ್ನಡಿಗರಿಗೆ ಸದಸ್ಯತ್ವ ನೀಡುವ ಗುರಿ ಹೊಂದಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.
ಪಟ್ಟಣದ ಬಾಬು ಜಗಜೀವನ್ ರಾಮ್ ಭವನದಲ್ಲಿ ಕಸಾಪ ತಾಲೂಕು ಹಾಗೂ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಜಿಲ್ಲೆಯಲ್ಲಿ ಸಾಹಿತ್ಯ ಆಸಕ್ತರನ್ನು ಸೆಳೆಯಲು ನಿರಂತರ ಕಾರ್ಯಕ್ರಮ ಆಯೋಜಿಸಲಾಗುವುದು. ಲಿಂಗಸುಗೂರಿನಲ್ಲಿ 11ನೇ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನ, ಮಾನ್ವಿಯಲ್ಲಿ ಮಹಿಳಾ ಸಮ್ಮೇಳನ, ಸಿಂಧನೂರಿನಲ್ಲಿ ಬಹುಭಾಷಾ ಕವಿಗೋಷ್ಠಿ, ತತ್ವ ಪದಕಾರರ ಸಮ್ಮೇಳನ, ದಲಿತ ಹಾಗೂ ಬಂಡಾಯ ಸಮ್ಮೇಳನ ಆಯೋಜಿಸಲಾಗುವುದು.
ತಾಲೂಕಿನಲ್ಲಿ ಕಸಾಪ ಭವನ ನಿರ್ಮಾಣ ಮಾಡಲು ಶಾಸಕರಿಗೆ ಮನವಿ ಮಾಡಲಾಗುವುದು. ಶೀಘ್ರದಲ್ಲಿ 4ನೇ ತಾಲೂಕು ಸಮ್ಮೇಳನ ನಡೆಸಲಾಗುವುದು. ಸದಸ್ಯತ್ವ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಯುವಜನರು ಹೆಚ್ಚಾಗಿ ತೊಡಗಿಸಿಕೊಂಡು ಆನ್ಲೈನ್ ಹಾಗೂ ಆಫ್ಲೈನ್ನಲ್ಲೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕ ಡಾ.ಪ್ರಕಾಶ ಬುದ್ದಿನ್ನಿ ಮಾತನಾಡಿ, ಜನಪದ ಅನಕ್ಷರಸ್ಥರ ಸಾಹಿತ್ಯ ಎನ್ನುವ ಮನೋಭಾವ ಕ್ಷೀಣಿಸುತ್ತಿದ್ದು, ಸಾಹಿತ್ಯ ವಲಯ ಜನಪದ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.
ಅಕ್ಷರ ಕಲಿತ ತಾಯಿ ಜನಪದ ಶೈಲಿ ಚಂದ್ರನ ತೋರಿಸಿ ಮಗುವಿಗೆ ಊಟ ಮಾಡಿಸುವ ಬದಲು ಮೊಬೈಲ್ ತೋರಿಸಿ ಊಟ ಮಾಡಿಸುವುದು ನೋವಿನ ಸಂಗತಿಯಾಗಿದೆ.
ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋನಲ್ಲಿ ಜನಪದವಿಲ್ಲ. ಆಧುನೀಕ ಜೀವನ ಶೈಲಿಯಲ್ಲಿ ನಗಲು ಲಾಫಿಕ್ ಕ್ಲಬ್ಗೆ ಹೋಗುವ ದುಃಸ್ಥಿತಿ ಬಂದಿದೆ. ಜನಪದ ಅಧ್ಯಯನ ಮಾಡಿದರೆ ಸುಖ, ದುಃಖ ಎಲ್ಲ ಸಿಗಲಿದೆ. ಹೀಗಾಗಿ ಯುವಜನತೆ ಜನಪದ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಬೇಕೆಂದು ತಿಳಿಸಿದರು.
ದಾಸ ಸಾಹಿತ್ಯ ಕುರಿತು ಡಾ.ಚಂದ್ರಕಾಂತ ಶೆಟ್ಟಿಕೇರಾ ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಸಂಘಟನಾ ಕಾರ್ಯದರ್ಶಿ ಮೈನುದ್ದೀನ್ ಕಾಟಮಳ್ಳಿ, ವಿಶೇಷ ಪ್ರತಿನಿಧಿ ವೀರಣ್ಣ ಬಳೆ, ಪ್ರಮುಖರಾದ ರಂಗಪ್ಪ ಕೋತಿಗುಡ್ಡ, ಈರಣ್ಣ ರುದ್ರಾಕ್ಷಿ, ವೆಂಕಟೇಶ ನೀಲಗಲ್, ರಾಮಣ್ಣ ನಾಯಕ, ಸ್ವಾತಂತ್ರ್ಯ ಹೋರಾಟಗಾರ್ತಿ ಆದಿಕಮಲಮ್ಮ, ವಿಜಯಲಕ್ಷ್ಮೀ, ಗಂಗಮ್ಮ ಇದ್ದರು.