ಕಸಾಪ ಸುವರ್ಣ ಮಹೋತ್ಸವಕ್ಕೆ ನಿರ್ಧಾರ

Suresh Chanshetty
Published on

ಬೀದರ್: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಗೆ 50 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ನಿಮಿತ್ತ ವಿವಿಧ ಯೋಜನೆಗಳನ್ನು ಜಾರಿಗೆ ತರುವಂತೆ ಪರಿಷತ್ ಆಗ್ರಹಿಸಿದೆ.

ಈ ಕುರಿತು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ನೇತೃತ್ವದ ನಿಯೋಗ ಶನಿವಾರ ಜಿಲ್ಲಾ ಉಸ್ತವಾರಿ ಸಚಿವ ಪ್ರಭು ಚವ್ಹಾಣ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ಗಡಿ ಭಾಗ ಬೀದರ್ನಲ್ಲಿ ಪರಿಷತ್ ಆರಂಭವಾಗಿ 50 ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಅನೇಕ ಕೆಲಸ ನಡೆದಿವೆ. ಇದರ ಸವಿನೆನಪಿಗಾಗಿ ನವೆಂಬರ್ನಲ್ಲಿ ಸುವರ್ಣ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ವಿವಿಧ ಕಾರ್ಯಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ.

ಬೀದರ್, ಭಾಲ್ಕಿ, ಔರಾದ್ ಹೊರತುಪಡಿಸಿ ಜಿಲ್ಲೆಯ ಇತರೆ ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನ ಇಲ್ಲ. ಹೀಗಾಗಿ ಇಲ್ಲಿ ಭವನಕ್ಕಾಗಿ ನಿವೇಶನ ಒದಗಿಸಬೇಕು. ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ವಲಯಗಳ ಕಚೇರಿ ಮತ್ತು ಅಂಗಡಿಗಳ ನಾಮಫಲಕಗಳನ್ನು ಪ್ರಥಮ ಆದ್ಯತೆಯಾಗಿ ಕಡ್ಡಾಯ ಕನ್ನಡದಲ್ಲಿರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ವಿವಿಧ ಪ್ರಮುಖ ರಸ್ತೆ, ಉದ್ಯಾನವನ, ಬಸ್ ನಿಲ್ದಾಣಗಳಿಗೆ ಕವಿ ಹಾಗೂ ದಾರ್ಶನಿಕರ ಹೆಸರು ನಾಮಕರಣ ಮಾಡಬೇಕು. ಜಿಲ್ಲೆಯ ಎಲ್ಲ ಹೊರಭಾಗದ ಗಡಿಗಳಲ್ಲಿ ಸ್ವಾಗತ ಕಮಾನ ಹಾಗೂ ಧ್ವಜಸ್ತಂಭ ನಿರ್ಮಿಸಬೇಕು. ಎಲ್ಲ ಗ್ರಾಪಂನಲ್ಲಿ ಗ್ರಂಥಾಲಯ ಸುಸಜ್ಜಿತಗೊಳಿಸಿ ಜನೋಪಯೋಗಿಯಾಗುವಂತೆ ಕ್ರಮ ಜರುಗಿಸಬೇಕು. ವಿವಿಧ ಕ್ಷೇತ್ರಗಳ ಸಾಧಕರ 50 ಕೃತಿ ಹಾಗೂ 50 ಗ್ರಾಮಗಳ ಚರಿತ್ರೆಯ ಪುಸ್ತಕ ಹೊರತರಲು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆ ಮಂಡಿಸಲಾಯಿತು.

ಪರಿಷತ್ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ, ಗಡಿ ಪ್ರತಿನಿಧಿ ಶಿವಕುಮಾರ ಕಟ್ಟೆ, ವಲಯ ಅಧ್ಯಕ್ಷ ಪ್ರಭು ತೂಗಾಂವೆ ಇತರರಿದ್ದರು.

ಬೀದರ್ ಕಸಾಪಕ್ಕೆ 50 ವರ್ಷ ಸಂದಿರುವ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಿನಲ್ಲಿ ದೊಡ್ಡ ಮಟ್ಟದಲ್ಲಿ ಸುವರ್ಣ ಮಹೋತ್ಸವವನ್ನು ಆಯೋಜಿಸಲು ನಿರ್ಧರಿಸಿದ್ದು, ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು. ರಾಜ್ಯದ ವಿವಿಧೆಡೆಯ ಖ್ಯಾತ ಸಾಹಿತಿ, ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು.| ಸುರೇಶ ಚನ್ನಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net