

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಬಳ್ಳಾರಿಯ ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿ ಏ. 27ರಂದು ಹಮ್ಮಿಕೊಂಡಿದ್ದ ವಿಶೇಷ ಸಭೆ, ವಾರ್ಷಿಕ ಸಾಮಾನ್ಯ ಸಭೆ ಹಾಗೂ ಕಾರ್ಯಕಾರಿ ಸಮಿತಿ ಸಭೆಯನ್ನು ಮುಂದೂಡಿದೆ.
ಪರಿಷತ್ತು ಬಳ್ಳಾರಿಯಲ್ಲಿ ನಡೆಸಲು ಉದ್ದೇಶಿರುವ ಸರ್ವ ಸದಸ್ಯರ ಸಭೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಸಾಹಿತಿಗಳು, ಚಿಂತಕರು ಹಾಗೂ ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ ಬೆನ್ನಲ್ಲೇ ಪರಿಷತ್ತು ಹವಾಮಾನ ವೈಪರೀತ್ಯ ಹಾಗೂ ಬಿಸಿಲಿನ ಕಾರಣಕ್ಕೆ ಸಭೆ ಮುಂದೂಡಲಾಗಿದೆ ಎಂದು ತಿಳಿಸಿದೆ.
ಹವಾಮಾನ ವೈಪರೀತ್ಯ ಹಾಗೂ ಬಿಸಿಲಿನ ತಾಪಮಾನ ಏರಿಕೆ ಹಿನ್ನೆಲೆ ಜಿಲ್ಲಾ ಪರಿಷತ್ತು ಕಾರ್ಯಕಾರಿ ಸಮಿತಿಯು ಸಭೆ ಮುಂದೂಡಲು ಕೇಂದ್ರ ಕಸಾಪಕ್ಕೆ ಪತ್ರ ಬರೆದಿತ್ತು. ಇದೇ ವೇಳೆ ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿಗಳು ಸಹ ಬಿಸಿಲು ಹೆಚ್ಚಿರುವುದರಿಂದ ಮಧ್ಯಾಹ್ನದ ಸಮಯದಲ್ಲಿ ಕಾರ್ಯಕ್ರಮ ನಡೆಸುವುದರಿಂದ ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಸೂರ್ಯಾಘಾತ (ಸನ್‌ಸ್ಟ್ರೋಕ್) ಆಗುವ ಸಾಧ್ಯತೆಗಳು ಇವೆ ಎಂದು ಹೇಳಿತ್ತು. ಈ ಎಲ್ಲ ಕಾರಣಗಳಿಂದಾಗಿ ನಿಗದಿತ ಸಭೆಯನ್ನು ಜೂ. 22ಕ್ಕೆ ಮುಂದೂಡಲಾಗಿದೆ ಎಂದು ಪರಿಷತ್ತು ಹೇಳಿದೆ.
ಸಭೆ ರದ್ದತಿಗೆ ಒತ್ತಾಯ:
ಈ ಸಭೆಯ ಕುರಿತು ಪರಿಷತ್ತಿನ ಸದಸ್ಯರಿಗೆ ಮಾಹಿತಿ ನೀಡದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ತಮಗೆ ಬೇಕಾದವರನ್ನು ಮಾತ್ರವೇ ಸಭೆಗೆ ಕರೆಸಿಕೊಂಡು ಬೈ-ಲಾ ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. ಈ ರೀತಿ ಸರ್ವಾಧಿಕಾರದತ್ತ ಹೊರಟಿರುವುದು ಪರಿಷತ್ತಿನ ಮೂಲ ಆಶಯಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಸಾಹಿತಿಗಳು, ಚಿಂತಕರು ಹಾಗು ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ ಪರಿಷತ್ತಿನ ನಿಲುವುಗಳಿಗೆ ಸಂಬಂಧಿಸಿದಂತೆ ನಮ್ಮ ಯಾವುದೇ ಪತ್ರಗಳಿಗೆ ಪರಿಷತ್ತಿನ ಅಧ್ಯಕ್ಷರು ಉತ್ತರ ನೀಡುವ ಸೌಜನ್ಯವನ್ನೂ ತೋರದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ಜಾಣಗೆರೆ ವೆಂಕಟರಾಮಯ್ಯ, ಜಯಪ್ರಕಾಶಗೌಡ, ಶ್ರೀನಿವಾಸ ಜಿ. ಕಪ್ಪಣ್ಣ, ಆರ್. ಜೆ. ಹಳ್ಳಿ ನಾಗರಾಜ್, ವೈ.ಕೆ. ಮುದ್ದುಕೃಷ್ಣ, ಸಿ.ಕೆ. ರಾಮೇಗೌಡ, ಆರ್. ಕೋದಂಡರಾಮ್, ಎಂ. ಬಾಲಕೃಷ್ಣ, ಎಲ್. ಹರ್ಷ, ವಿ. ಹರ್ಷ, ಮಹದೇವ್ ಕಾರಸವಾಡಿ, ಎಚ್. ರಂಗಸ್ವಾಮಿ ಸೇರಿ ಹಲವರು ಪರಿಷತ್ತು ನಡೆಸಲು ಹೊರಟಿರುವ ಸರ್ವ ಸದಸ್ಯರ ಸಭೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದರು.