ಕಸಾಪ ಸಂಘಟಿತವಾಗಲಿ

29 vikram 6A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡದ ನೆಲ-ಜಲ ಪ್ರಶ್ನೆ ಕುರಿತು ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಧ್ವನಿ ಎತ್ತಲು ಕನ್ನಡ ಸಾಹಿತ್ಯ ಪರಿಷತ್ ಸಂಘಟನೆ ರೂಪಗೊಳ್ಳಬೇಕಿದೆ ಎಂದು ಸಂಶೋಧಕ ಸಾಹಿತಿ ಡಾ. ಕೆ.ಎಸ್. ದುರ್ಗಾದಾಸ ಹೇಳಿದರು.
ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಧಾರವಾಡ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅವರು ಸಮಾರೋಪ ಭಾಷಣ ಮಾಡಿದರು.
ಸಮ್ಮೇಳನದಲ್ಲಿ ಬರೀ ಭಾಷಣ ಕೇಳಲು ಜನರಿಗೆ ಬೇಸರ ತರಬಹುದು. ಹೀಗಾಗಿ ಜನತೆಗೆ, ಮಕ್ಕಳಿಗೆ ಬೇಸರ ಬರದಂತೆ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಆಟಗಳು ಏರ್ಪಡಿಸಬೇಕು. ಮುಮ್ಮಿಗಟ್ಟಿಯಲ್ಲಿ ಸಮ್ಮೇಳನ ಆಯೋಜನೆ ಔಚಿತ್ಯಪೂರ್ಣ. ಗ್ರಾಮೀಣದಲ್ಲಿ ಸಮ್ಮೇಳನ ಏರ್ಪಡಿಸುವಾಗ ಗ್ರಾಮೀಣರ ಅಭಿರುಚಿ ಗೋಷ್ಠಿಗಳು, ಕಾರ್ಯಕ್ರಮ ಆಯೋಜನೆಗೆ ಕಸಾಪ ಆದ್ಯತೆ ನೀಡಬೇಕು. ಸ್ಥಳೀಯ ಪ್ರತಿಭೆ ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಜಿಲ್ಲಾ ಕಸಾಪ ಮಾಡಿದಾಗಲೇ ಸಮ್ಮೇಳನಕ್ಕೆ ಸಾರ್ಥಕತೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ವಿಷಯಗಳನ್ನು ಜಾರಿಗೆ ತರುವಂತೆ ಪ್ರಯತ್ನಿಸಲು ಸಲಹೆ ನೀಡಿದರು.
ಸಮ್ಮೇಳನಾಧ್ಯಕ್ಷೆ ಲೀಲಾ ಕಲಕೋಟಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕೋಶಾಧ್ಯಕ್ಷ ಡಾ. ಎಸ್.ಎಸ್. ದೊಡಮನಿ, ತಾಲೂಕಾಧ್ಯಕ್ಷೆ ಡಾ. ಶರಮ್ಮ ಗೋರೆಬಾಳ, ಡಾ. ಜಿದನದತ್ತ ಹೆಗಡಲಿ, ಮಾರ್ತಾಂಡಪ್ಪ ಕತ್ತಿ, ಕೆ.ಎಸ್. ಕೌಜಲಗಿ, ಇತರರು ಇದ್ದರು.
ಶಿವರುದ್ರಗೌಡ ಪಾಟಿಲ ಸ್ವಾಗತಿಸಿದರು. ಸುರೇಶ ಗುಂಡಣ್ಣವರ ನಿರೂಪಿಸಿದರು. ಸುರೇಶ ಕಾಟಕರ ವಂದಿಸಿದರು.
-----ಬಾಕ್ಸ್----
ಚಾಲಕಿಯಾದ ಹೆಡ್ ಮಾಸ್ಟರ್
ಬೆಳಗ್ಗೆ ಸಮ್ಮೇಳನ ಉದ್ಘಾಟನೆಗೂ ಪೂರ್ವ ಏರ್ಪಡಿಸಿದ್ದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸರ್ಕಾರಿ ಶಾಲೆ ಮುಖ್ಯಾಧ್ಯಾಪಕಿ ಅಧ್ಯಕ್ಷರು ಆಸೀನರಾಗಿದ್ದ ಟ್ರಾಕ್ಟರ್ ಚಲಾಯಿಸಿ ಗಮನ ಸೆಳೆದರು. ಸಮ್ಮೇಳನಾಧ್ಯಕ್ಷೆ ಲೀಲಾ ಕಲಕೋಟಿ ಅವರನ್ನು ಮುಖ್ಯ ವೇದಿಕೆಗೆ ಮೆರವಣಿಗೆ ಮೂಲಕ ಕರೆ ತರಲು ಅಲಂಕರಿಸಿದ್ದ ಟ್ರಾೃಕ್ಟರ್ ಅನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕಿ ಕವಿತಾ ಅಸ್ನೋಟಿಕರ್ ಚಾಲಾಯಿಸಿದ್ದು ವಿಶೇಷವಾಗಿತ್ತು.
----ಬಾಕ್ಸ್----
ಸಮ್ಮೇಳನ ನಿರ್ಣಯಗಳು
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕಸಾಪ ಜಿಲ್ಲಾ ಘಟಕವು ಜಿಲ್ಲೆಯ ಎಲ್ಲ ಸಾಹಿತಿಗಳ ತಲಾ ಒಂದೊಂದು ಕೃತಿ ಸಂಗ್ರಹಿಸಿ ಗ್ರಂಥಾಲಯ ರೂಪದಲ್ಲಿ ಮುಕ್ತವಾಗಿ ಓದುವಂತೆ ಮಾಡುವುದು, ಧಾರವಾಡ ಜಿಲ್ಲೆಯ ಮಹಿಳಾ ಸಾಹಿತಿಗಳು, ಕಲಾವಿದರ, ಸಾಧಕಿಯರ ಸಂಕ್ಷಿಪ್ತ ಪರಿಚಯ ಒಳಗೊಂಡ ಮಾಹಿತಿ ಕೋಶ ರಚನೆ, ಆಡಂಬರದ ಸಮ್ಮೇಳನಕ್ಕಿಂತ ಸಾಹಿತ್ಯ ಪರಿಷತ್‌ನಿಂದ ಗ್ರಾಮೀಣ ಶಾಲೆಗಳಲ್ಲಿ ಸರ್ಕಾರದ ಜತೆ ಸೇರಿ ಮಾತೃ ಭಾಷೆಗೆ ಒತ್ತು ನೀಡಿ, ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮ ಆಯೋಜನೆ ಹಾಗೂ ಅನುವಾದದ ಕಲೆ ಹೆಚ್ಚು ಜನಪ್ರಿಯಗೊಳಿಸುವುದು ಎಂಬ ನಿರ್ಣಯ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net