ಕಸಾಪ ಕಾರ್ಯವೈಖರಿಗೆ ಬೇಸರ

KASAPA LOGO
Published on

ಗದಗ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪೂರ್ಣಗೊಂಡು 62 ದಿನ (2021 ನವೆಂಬರ್ 21) ಕಳೆದರೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಆಯ್ಕೆ ಕುರಿತು ಅಧಿಕೃತ ಘೋಷಣೆಯಾಗಿಲ್ಲ. ಇಷ್ಟು ನಿಧಾನಗತಿಯಲ್ಲಿ ಸಾಗಿರುವ ಕಸಾಪ ಕಾರ್ಯವೈಖರಿ ಮುಂದಿನ ಐದು ವರ್ಷ ಹೇಗಿರಲಿದೆ ಎಂಬ ಕಳವಳ ಸಾಹಿತಿಗಳಲ್ಲಿ ಮೂಡಿದೆ.

‘ಯಾವುದೇ ವ್ಯಕ್ತಿ ಒಂದು ಜವಾಬ್ದಾರಿ ವಹಿಸಿಕೊಂಡ ನಂತರ ಕ್ರಿಯಾಶೀಲನಾಗಿ ಆರಂಭದಲ್ಲಿಯೇ ಹೆಚ್ಚು ಕೆಲಸ ಮಾಡಿದರೆ ಅರ್ಧ ಕೆಲಸ ಪೂರ್ಣಗೊಳಿಸಿದಂತೆ‘ ಎಂಬುದು ನಾಣ್ನುಡಿ. ಆದರೆ, ಇದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ನ ಇತಿಹಾಸದಲ್ಲಿ ಹುಸಿಯಾಗಿದೆ ಎಂದು ಜಿಲ್ಲೆಯ ಸಾಹಿತ್ಯ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ, ಗದಗ, ಗಜೇಂದ್ರಗಡ ಮತ್ತು ಲಕ್ಷೆ್ಮೕಶ್ವರ ತಾಲೂಕುಗಳಿವೆ. 5999 ಕಸಾಪ ಆಜೀವ ಸದಸ್ಯರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆಜೀವ ಸದಸ್ಯರು ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದು ಸಾಮಾನ್ಯ. ಆದರೆ, ಚುನಾವಣೆಯಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿ ಅಧ್ಯಕ್ಷರಾದ ನಂತರ ಆಯಾ ತಾಲೂಕಿನ ಆಜೀವ ಸದಸ್ಯರ ಸಭೆ ಕರೆದು ತಾಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಆದರೆ, ಜಿಲ್ಲೆಯ ಕಸಾಪ ಇತಿಹಾಸದಲ್ಲಿ 2 ತಿಂಗಳು 2 ದಿನ ಕಳೆದರೂ ಆಜೀವ ಸದಸ್ಯರ ಬಹಿರಂಗ ಸಭೆ ನಡೆದು ಪದಾಧಿಕಾರಿಗಳ ಆಯ್ಕೆ ನಡೆಯದಿರುವುದು ವಿಪರ್ಯಾಸ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.

ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ ವಿಷಯ ಬಂದಾಗಲೂ ಯಾವುದೇ ಅಧಿಕೃತ ಪ್ರಕಟಣೆಗಳು ಹೊರಬಿದ್ದಿಲ್ಲ. ಜಿಲ್ಲಾ ಘಟಕ ಮುಖ್ಯ ಘಟಕವಾಗಿದೆ. ಈ ಘಟಕ ರಚಿಸಲು ಇಷ್ಟು ದಿನಗಳಾದರೂ ಮುಂದೆ ಕೆಲಸವನ್ನಾದರೂ ಹೇಗೆ ಮಾಡುತ್ತಾರೆಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದವರು 10-15 ದಿನಗಳಲ್ಲಿ ಕಸಾಪ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪದಗ್ರಹಣ ಮಾಡುವುದು ವಾಡಿಕೆ. ಆದರೆ, ಈ ಬಾರಿ ಚುನಾವಣೆ ಮುಗಿದು ತಿಂಗಳ ಮೇಲಾದರೂ ಅಧಿಕಾರ ಸ್ವೀಕಾರದ ಕುರಿತು ಚಕಾರ ಎತ್ತುತ್ತಿಲ್ಲ.

ಇದಲ್ಲದೆ, ಚುನಾವಣೆ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಹಲವಾರು ಆಶ್ವಾಸನೆಗಳನ್ನು ನೀಡಲಾಗಿದ್ದು, ಈ ಪೈಕಿ 100 ಪುಸ್ತಕಗಳ ಪ್ರಕಟಣೆ, 35 ತಾಲೂಕು ಸಾಹಿತ್ಯ ಸಮ್ಮೇಳನ ಮಾಡುವುದು, ಐದು ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡುವ ಭರವಸೆ ಹಾಗೂ ಸಾಹಿತ್ಯ ಭವನಗಳ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಆದರೆ, ಕಸಾಪ ಜಿಲ್ಲಾ ಕನ್ನಡ ತೇರಿನ ಗಾಲಿ ವಿಳಂಬಗತಿಯಲ್ಲಿ ಸಾಗಿದ್ದು, ಪ್ರಣಾಳಿಕೆಯಲ್ಲಿ ನೀಡಿರುವ ಅಷ್ಟೂ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಎಂದು ಜಿಲ್ಲೆಯ ಪ್ರಜ್ಞಾವಂತರು ಕೇಳುವಂತಾಗಿದೆ.

ಕಸಾಪ ಗದಗ ಜಿಲ್ಲಾ ಚುನಾವಣೆ ಸಂದರ್ಭದಲ್ಲಿ ಚುನಾವಣೆಗಾಗಿ ಜಾತಿ, ಪಕ್ಷ ಹಾಗೂ ಮಠಗಳನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದೆ. ಅಲ್ಲದೆ, ನಾನು ಮಾಡಿದ್ದ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದೆ. ಕಸಾಪ ಆಜೀವ ಸದಸ್ಯರ ತೀರ್ಪನ್ನು ಪ್ರಾಮಾಣಿಕವಾಗಿ ಪಾಲಿಸುತ್ತೇನೆ. ನೂತನ ಅಧ್ಯಕ್ಷರು ಚುನಾವಣೆ ಸಮಯದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಲಿ. ಜತೆಗೆ ಬೇಗನೆ ಅಧಿಕಾರ ಸ್ವೀಕರಿಸಿ ಸಾಹಿತ್ಯಿಕ ಚಟುವಟಿಕೆಗಳನ್ನು ಆರಂಭಿಸಬೇಕು.| ಶರಣು ಗೋಗೇರಿ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಗದಗ

ಕಸಾಪ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಿ 15 ದಿನಗಳ ಹಿಂದೆ ರಾಜ್ಯಾಧ್ಯಕ್ಷರಿಗೆ ಕಳುಹಿಸಲಾಗಿದೆ. ಆದರೆ, ಇಲ್ಲಿಯವರೆಗೆ ಪಟ್ಟಿ ಅನುಮೋದನೆಯಾಗಿ ಮರಳಿ ಬಂದಿಲ್ಲ. ರಾಜ್ಯಾಧ್ಯಕ್ಷರ ಅನುಮತಿ ಇಲ್ಲದೇ ಏನನ್ನೂ ಮಾಡುವಂತಿಲ್ಲ. ಜಿಲ್ಲಾಧ್ಯಕ್ಷನಾಗಿ ಗೆಲುವು ಸಾಧಿಸಿದ ಎರಡೇ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಂದ ಚಾರ್ಜ್ ಪಡೆದುಕೊಂಡಿದ್ದೇನೆ.| ವಿವೇಕಾನಂದಗೌಡ ಪಾಟೀಲ, ಜಿಲ್ಲಾಧ್ಯಕ್ಷ, ಕಸಾಪ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net