ಕಸವೂ ಗ್ರಾಪಂ ಆದಾಯ ಮೂಲ

10-klr-5
Published on

ಕೋಲಾರ: ನಿಮ್ಮ ಸ್ವಂತದ್ದಾದರೆ ಒಂದು ದಿನದಲ್ಲಿ ಕೆಲಸ ಮಾಡಿಸಿಕೊಂಡು ಬರುತ್ತೀರಿ, ಪಂಚಾಯಿತಿ ಕೆಲಸವಾದರೆ ವರ್ಷಗಳಾದರೂ ಆಗುವುದಿಲ್ಲ ಏಕೆ ಎಂದು ಜಿಪಂ ಸಿಇಒ ಎನ್.ಎಂ. ನಾಗರಾಜ್ ಗ್ರಾಪಂ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಜಿಪಂ. ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸ್ವಚ್ಚ ಭಾರತ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆ ಬಹಿರ್ದೆಸೆಮುಕ್ತವಾಗಿದೆ. ಮುಂದುವರಿದ ಭಾಗವಾಗಿ ಪ್ರತಿ ಪಂಚಾಯಿತಿಯಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕು. ಜಾಗದ ಸಮಸ್ಯೆ ಬಗ್ಗೆ ಸಾಕಷ್ಟು ದೂರು ಬಂದಿವೆ. ಜನ ಹೇಳಿದಂತೆ ಕೇಳಬೇಕು ಎಂಬುದನ್ನು ಬಿಟ್ಟು ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಕೀತು ಮಾಡಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ನೇಮಕವಾದ ಪ್ರಾರಂಭದಲ್ಲಿ ಹಾಕಿಕೊಳ್ಳಲು ಸರಿಯಾದ ಬಟ್ಟೆ, ಊಟ ಇರಲಿಲ್ಲ. ಆ ಸಂದರ್ಭದಲ್ಲಿ ಕನಿಷ್ಠ ಸೈಕಲ್ ಕೂಡ ಇರಲಿಲ್ಲ. ಇವತ್ತು ತಮಗೆಲ್ಲ ಕಾರು, ಐಶಾರಾಮಿ ಜೀವನಕ್ಕೆ ಬೇಕಾದ ಎಲ್ಲ ವಸ್ತುಗಳು ಸಿಕ್ಕಿದೆ. ಕನಿಷ್ಠ ಪಕ್ಷ ತಮ್ಮ ಅಧಿಕಾರದ ಅವಧಿಯಲ್ಲಿ ಸಮಾಜಕ್ಕೆ ಜನಕ್ಕೆ ಏನಾದರೂ ಕೊಡುಗೆ ನೀಡಬೇಕಾದ ಜವಾಬ್ದಾರಿ ನಿಮ್ಮ ಮೇಲೆ ಇದೆ. ಪಿಡಿಒಗಳು ಮನಸ್ಸು ಮಾಡಿದರೆ ಹಳ್ಳಿಗಳನ್ನು ಹೇಗೆ ಬೇಕಾದರೂ ಅಭಿವೃದ್ಧಿ ಮಾಡಬಹುದು. ಇದನ್ನು ಅರ್ಥ ಮಾಡಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಗ್ರಾಮಗಳ ನೈರ್ಮಲ್ಯ ಕಾಪಾಡುವುದು ನಮ್ಮ ಹೊಣೆ. ಕಸದಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ತಪ್ಪಿಸಬೇಕು. ಒಣ ಮತ್ತು ಹಸಿ ಕಸವನ್ನು ಮೂಲದಲ್ಲೇ ವಿಂಗಡಿಸುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ಗ್ರಾಪಂ ಸಭೆಗಳಲ್ಲಿ ಸ್ವಚ್ಛತೆ ಬಗ್ಗೆ ಪ್ರತ್ಯೇಕ ಅಜೆಂಡಾ ಇಟ್ಟು ಜಾರಿ ಮಾಡಿಸಬೇಕು. ಕಸ ಸಂಗ್ರಹಿಸುವ ವಾಹನಕ್ಕೆ ಜಲಗಾರರಿಗೆ ವಾಹನ ಚಾಲನಾ ತರಬೇತಿ ನೀಡಿ ಅವರನ್ನೇ ಬಳಸಿಕೊಳ್ಳಬೇಕು. ಯೋಜನೆ ಅನುಷ್ಠಾನಕ್ಕೆ 15ನೇ ಹಣಕಾಸು ಯೋಜನೆಯಲ್ಲಿ ಮತ್ತು ಕಸ ಮಾರಾಟ ಮಾಡಿದ ಹಣ ಬಳಸಿಕೊಂಡು ಗ್ರಾಮಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಸಂಗ್ರಹಿಸುವ ಕಸವನ್ನು ಕಸ ಎಂದು ಭಾವಿಸದೆ ಕಸ ಪಂಚಾಯಿತಿಯ ಆದಾಯದ ಮೂಲ ಎಂದು ಭಾವಿಸಿ, ಗ್ರಾಪಂಗಳಲ್ಲಿ ಕಸ ಸಂಗ್ರಹಿಸುವ ವಾಹನ, ಕಸದ ಬುಟ್ಟಿ ಸೇರಿ ಉಪಯೋಗಿಸುವ ವಸ್ತುಗಳು ಗುಣಮಟ್ಟದಿಂದ ಕೂಡಿರಬೇಕ.ು ಪಂಚಾಯಿತಿ ವಾಹನವನ್ನು ನಮ್ಮದೇ ಸ್ವಂತ ವಾಹನದಂತೆ ನೋಡಿಕೊಳ್ಳಬೇಕು. ಕಸ ಸಂಗ್ರಹಣೆಯಲ್ಲಿ ಗುರುತಿಸಿಕೊಂಡಿರುವ ಸಂಘ-ಸಂಸ್ಥೆಗಳನ್ನು ಆಯ್ಕೆ ಮಾಡಿದರೆ ಯೋಜನೆ ಅನುಷ್ಠಾನ ಸುಲಭ ಎಂದರು.

ಹಳ್ಳಿಗಳಲ್ಲಿ ಕಡ್ಡಾಯವಾಗಿ ಶೌಚಗೃಹ ಬಳಕೆ ಆಗುತ್ತಿರುವ ಬಗ್ಗೆ ಗಮನ ಹರಿಸಬೇಕು. ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳ ತಂಡ ಯಾವ ಸಂದರ್ಭದಲ್ಲಾದರೂ ಭೇಟಿ ನೀಡಬಹುದು. ಹೀಗಾಗಿ ಪಿಡಿಒಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು. ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಯೋಜನಾ ನಿರ್ದೇಶಕಿ ಶೃತಿ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಜಗದೀಶ್ ಸೇರಿದಂತೆ ತಾಪಂ ಇಒಗಳು, ಪಿಡಿಒಗಳು ಇದ್ದರು.

ಆ.15ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರತಿಯೊಂದು ಗ್ರಾಮವನ್ನು ಸ್ವಚ್ಛವಾಗಿಡಲು ಆ.11ರಿಂದ 13ರವರೆಗೆ ಮೂರು ದಿನ ಅಧಿಕಾರಿಗಳು ಹಳ್ಳಿಗಳಲ್ಲಿ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರ ಸಹಕಾರ ಪಡೆದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಎನ್.ಎಂ. ನಾಗರಾಜ್, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net