ಕಸಬಾಪೇಟ ಪೊಲೀಸ್ ಠಾಣೆ ಸೀಲ್​ಡೌನ್

carona logo
Published on

StartFragment

ಹುಬ್ಬಳ್ಳಿ: ಬೈಕ್ ಕಳ್ಳನೊಬ್ಬನನ್ನು ಹಿಡಿದು ತಂದಿದ್ದೇ ಕಸಬಾಪೇಟ ಠಾಣೆ ಪೊಲೀಸರಿಗೆ ಶಾಪವಾಗಿ ಪರಿಣಮಿಸಿದಂತಿದೆ. ಆರೋಪಿಗೆ ಸೋಂಕು ಪತ್ತೆಯಾದ ಬಳಿಕ ಠಾಣೆಯ 16 ಸಿಬ್ಬಂದಿಗೆ ಸೋಂಕು ಅಂಟಿದೆ. ಪರಿಣಾಮವಾಗಿ ಸಂಪೂರ್ಣ ಠಾಣೆಯನ್ನು ಭಾನುವಾರ ಸೀಲ್​ಡೌನ್ ಮಾಡಲಾಗಿದೆ.

ಮಹಾನಗರ ಪಾಲಿಕೆ ವತಿಯಿಂದ ಭಾನುವಾರ ಸ್ಯಾನಿಟೈಸೇಷನ್ ಮಾಡಿ ನಂತರ ಮೊಹರಬಂದ್ ಮಾಡಲಾಗಿದೆ. ತಾತ್ಕಾಲಿಕವಾಗಿ ಹಳೇ ಹುಬ್ಬಳ್ಳಿಯ ದುರ್ಗದ ಬೈಲ್ ಹೊರ ಠಾಣೆಗೆ ಸ್ಥಳಾಂತರಿಸಲಾಗಿದ್ದು, ಉಳಿದ ಸಿಬ್ಬಂದಿ ಹೊರಗಿನಿಂದಲೇ ಕರ್ತವ್ಯ ನಿರ್ವಹಿಸಲಿದ್ದಾರೆ.

ಕಸಬಾಪೇಟ ಪೊಲೀಸರು ಎರಡು ವಾರಗಳ ಹಿಂದೆ ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮುನ್ನ ತಪಾಸಣೆಗೆ ಒಳಪಡಿಸಿದಾಗ ಸೋಂಕು ಪತ್ತೆಯಾಗಿತ್ತು. ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸಿಬ್ಬಂದಿ ಸೇರಿ ಒಟ್ಟು 16 ಜನರಿಗೆ ಸೋಂಕು ಹರಡಿದೆ. ಅದರಲ್ಲಿ ಒಬ್ಬ ಸಿಬ್ಬಂದಿ ಮಾತ್ರ ಬಿಡುಗಡೆಯಾಗಿದ್ದು, ಉಳಿದವರು ಧಾರವಾಡದ ಬಿ.ಡಿ. ಜತ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಳಿದ ಠಾಣೆ ಸೀಲ್​ಡೌನ್ ಇಲ್ಲ?

ವಿದ್ಯಾನಗರ, ಉಪನಗರ, ಶಹರ ಠಾಣೆ, ಘಂಟಿಕೇರಿ ಠಾಣೆ ಸೇರಿ ಅವಳಿ ನಗರದ ವಿವಿಧ ಪೊಲೀಸ್ ಠಾಣೆಗಳ ಹಲವು ಪೊಲೀಸರಿಗೆ ಕರೊನಾ ವೈರಸ್ ತಗುಲಿದ್ದರೂ ಈವರೆಗೆ ಕಸಬಾಪೇಟ ಠಾಣೆ ಮಾತ್ರ ಸೀಲ್​ಡೌನ್ ಮಾಡಲಾಗಿದೆ. ಉಳಿದ ಠಾಣೆಗಳನ್ನು ಸೀಲ್​ಡೌನ್ ಮಾಡಿಲ್ಲ. ಕೇವಲ ಸ್ಯಾನಿಟೈಸೇಷನ್ ಮಾಡಿ ಕೈತೊಳೆದುಕೊಳ್ಳಲಾಗುತ್ತಿದೆ. ಇದರಿಂದಾಗಿ ಭಯದ ನಡುವೆಯೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸೀಲ್​ಡೌನ್ ಮತ್ತು ಕ್ವಾರಂಟೈನ್ ಸರಿಯಾಗಿ ಮಾಡದ ಕಾರಣ ದಿನದಿಂದ ದಿನಕ್ಕೆ ಪೊಲೀಸರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹಾಗಾಗಿ, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ‘ವಿಜಯವಾಣಿ’ ಬಳಿ ನೋವು ತೋಡಿಕೊಂಡಿದ್ದಾರೆ.

7 ಪೊಲೀಸರಿಗೆ ಪಾಸಿಟಿವ್

ಭಾನುವಾರ ಮತ್ತೆ ನಗರದ 7 ಪೊಲೀಸರಿಗೆ ಕರೊನಾ ಪಾಸಿಟಿವ್ ಬಂದಿದೆ. ವಿದ್ಯಾನಗರದ ಮೂವರು ಕಾನ್ಸ್​ಟೇಬಲ್, ಉಪನಗರ ಠಾಣೆಯ ಹೆಡ್ ಕಾನ್ಸ್​ಟೇಬಲ್, ಸಿಎಆರ್ ಕಾನ್ಸ್​ಟೇಬಲ್, ಕೇಶ್ವಾಪುರ ಠಾಣೆಯ ಕಾನ್ಸ್​ಟೇಬಲ್ ಹಾಗೂ ಕಸಬಾಪೇಟೆಯ ಕಾನ್ಸ್​ಟೇಬಲ್​ಗೆ ಸೋಂಕು ಹರಡಿದೆ.

ಆರೋಗ್ಯ ಇಲಾಖೆ ಎಡವಟ್ಟು

ಧಾರವಾಡ: ಕರೊನಾ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಗಂಟಲ ದ್ರವ ಪರೀಕ್ಷೆ ಮಾಡಿದ್ದ ಆರೋಗ್ಯ ಇಲಾಖೆ ಕೋವಿಡ್ ದೃಢಪಟ್ಟಿದೆ ಎಂದು ಹೇಳಿ, ಕೆಲ ಗಂಟೆಗಳ ನಂತರ ನಿಮ್ಮ ವರದಿ ಇನ್ನೂ ಬಂದಿಲ್ಲ ಎಂಬ ಸಂದೇಶ ಕಳುಹಿಸಿ ಎಡವಟ್ಟು ಮಾಡಿರುವ ಘಟನೆ ನಡೆದಿದೆ.

ನಗರದ ಹೆಬ್ಬಳ್ಳಿ ಅಗಸಿಯ ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜು. 13ರಂದು ಗಂಟಲ ದ್ರವ ಪರೀಕ್ಷೆಗೊಳಪಟ್ಟಿದ್ದ. ಆತನಿಗೆ ಕೋವಿಡ್ ದೃಢಪಟ್ಟಿದೆ ಎಂದು ಜು. 16ರಂದು ತಿಳಿಸಲಾಗಿತ್ತು. ಕೆಲ ಗಂಟೆಯ ನಂತರ ವರದಿ ಬಂದಿಲ್ಲ ಎಂದು ಸಂದೇಶ ಕಳುಹಿಸಿದ್ದರಿಂದ ಆತ ಗೊಂದಲಕ್ಕೆ ಸಿಲುಕಿದ್ದಾನೆ. ಆರೋಗ್ಯ ಇಲಾಖೆಯ ಯಾರೊಬ್ಬರೂ ಆತನ ಬಗ್ಗೆ ಕಾಳಜಿ ವಹಿಸಿಲ್ಲ. ಇದರಿಂದ ವ್ಯಕ್ತಿಯ ಕುಟುಂಬ ಹಾಗೂ ನೆರೆಹೊರೆಯುವರೂ ಗೊಂದಲಕ್ಕೆ ಸಿಲುಕಿದಂತಾಗಿದೆ. ಭಾನುವಾರ ಸಂಜೆವರೆಗೆ ಆರೋಗ್ಯ ಇಲಾಖೆಯ ಸ್ಪಂದನೆಗಾಗಿ ಕಾದ ವ್ಯಕ್ತಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾನೆ. ಈ ವ್ಯಕ್ತಿ ಕರೊನಾ ಸೋಂಕಿತ ವ್ಯಕ್ತಿಯೋ ಅಥವಾ ಶಂಕಿತ ವ್ಯಕ್ತಿಯೋ ಎಂಬುದು ತಿಳಿಯದೆ ಪೇಚಾಡುವಂತಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net