ಕಸಬಾ ಕೃಷಿ ಸಂಘಕ್ಕೆ ರಮೇಶ್ ಅಧ್ಯಕ್ಷ

9-KGL PHOTO-2,,,
Published on

ಕೊಳ್ಳೇಗಾಲ: ಕೊಳ್ಳೇಗಾಲ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ರಮೇಶ್ ಮಧುವನಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ಎಂ.ಶೇಖರ್ ಮುಳ್ಳೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ಪಟ್ಟಣದ ಬಸ್ತೀಪುರ ರಸ್ತೆಯಲ್ಲಿರುವ ಉಮಾಶಂಕರ್ ಕಲ್ಯಾಣ ಮಂಟಪದ ಎದುರಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಎಸ್.ರಮೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಶೇಖರ್ ಉಮೇದುವಾರಿಕೆ ಸಲ್ಲಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಮತ್ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಎಸ್.ನಾಗೇಶ್, ನೂತನ ಅಧ್ಯಕ್ಷರಾಗಿ ಎಸ್.ರಮೇಶ್, ಉಪಾಧ್ಯಕ್ಷರಾಗಿ ಎಂ.ಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.

ಕೊಳ್ಳೇಗಾಲ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 13 ನಿರ್ದೇಶಕರಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ನಿರ್ದೇಶಕರಾದ ಪಿ.ಮಹದೇವಸ್ವಾಮಿ, ಎಸ್.ರವಿಕುಮಾರ್, ಎಂ.ಕೆ. ಪುಟ್ಟಸ್ವಾಮಿ, ಎಂ.ಎನ್.ಅನ್ನಪೂರ್ಣ, ಲೋಕೇಶ್, ಸಿ.ಬಸವರಾಜು, ಬ್ಯಾಂಕ್ ಮೇಲ್ವಿಚಾರಕ ಕುಮಾರ್ ಒಟ್ಟು 9 ಜನ ನಿರ್ದೇಶಕರು ಹಾಜರಿದ್ದರು. ಇನ್ನ್ನುಳಿದ ನಿರ್ದೇಶಕರಾದ ಶೀಲಾ, ರಾಜಶೇಖರ್, ಮಂಜುನಾಥ್ ಮುಳ್ಳೂರು, ಇಂದ್ರೇಶ್ ಗೈರಾಗಿದ್ದರು. ಚುನಾವಣೆಯಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕಚೇರಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ. ನಾಗರಾಜು ಹಾಗೂ ಸಿಬ್ಬಂದಿ ಇದ್ದರು.

ಅಧ್ಯಕ್ಷ ರಮೇಶ್ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಮಹಾಪೂರ: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 25ನೇ ನೂತನ ಅಧ್ಯಕ್ಷ ಎಸ್.ರಮೇಶ್ ಹಾಗೂ ಉಪಾಧ್ಯಕ್ಷ ಎಂ. ಶೇಖರ್ ಅವರಿಗೆ ಅಭಿನಂದನೆ ಮಹಾಪೂರ ಹರಿದು ಬಂದಿತು. ಹಾಲಿ ನಿರ್ದೇಶಕರು, ಮಾಜಿ ನಿರ್ದೇಶಕರು, ರಾಜಕೀಯ ಮುಖಂಡರು ಹಾಗೂ ರೈತರು ಹಾರ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.

ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಅಧಿಕಾರ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಂಘದ ನಿರ್ದೇಶಕರ ಜತೆಗೂಡಿ ಕಾರ್ಯನಿರ್ವಹಿಸಿ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುತ್ತೇನೆ. ರೈತರ ಪರವಾಗಿ ಕೆಲಸ ಮಾಡಲು ನನಗೆ ಉತ್ತಮ ವೇದಿಕೆ ದೊರೆತಿದೆ. ನಾನು ಅಧ್ಯಕ್ಷನಾಗಿ ಅವಿರೋಧ ಆಯ್ಕೆಯಾಗಲು ಸಹಕರಿಸಿದ ಮಾಜಿ ಶಾಸಕ ಆರ್.ನರೇಂದ್ರ, ಸಂಘದ ನಿರ್ದೇಶಕರು, ಸದಸ್ಯರು, ಮುಖಂಡರಿಗೆ ಧನ್ಯವಾದವನ್ನು ತಿಳಿಸುತ್ತೇನೆ. ಎಂ.ರಮೇಶ್ ಮಧುವನಹಳ್ಳಿ, ನೂತನ ಅಧ್ಯಕ್ಷ, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net