ಕಸದಲ್ಲಿ ಹುದುಗಿದ ’ಪರಿಸರ ಪ್ರಶಸ್ತಿ’!

7cmy1
Published on

ಚಿಂತಾಮಣಿ : ವೈಜ್ಞಾನಿಕ ಕಸ ವಿಲೇವಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ 2011ರಲ್ಲಿ ಪರಿಸರ ಪ್ರಶಸ್ತಿ ಪಡೆದಿದ್ದ ಚಿಂತಾಮಣಿ ನಗರಸಭೆ ಈಗ ಅಧಿಕಾರಿಗಳ ಜಾಣಕುರುಡು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಸ ರಸ್ತೆಯಲ್ಲೇ ಕೊಳೆಯುತ್ತಿದೆ.

ಎಲ್ಲ ಸ್ಥಳೀಯ ಸಂಸ್ಥೆಗಳು ವೈಜ್ಞಾನಿಕ ರೀತಿಯಲ್ಲಿ ತಮ್ಮದೇ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಹೊಂದಿರಬೇಕೆಂಬ ಸುಪ್ರೀಂಕೋರ್ಟ್ ಆದೇಶದಂತೆ ನಗರಸಭೆ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು, ಅದರಲ್ಲಿ ಯಶಸ್ವಿಯಾಗಿತ್ತು, ಆದರೀಗ ಅದೆಲ್ಲವೂ ಎಲ್ಲೆಂದರಲ್ಲಿ ಬಿದ್ದರುವ ಪ್ಲಾಸ್ಟಿಕ್, ವಿಲೇವಾರಿಯಾಗದೆ ಗಬ್ಬುನಾರುತ್ತಿರುವ ಕಸದ ರಾಶಿಯಲ್ಲಿ ಕೊಳೆಯುತ್ತಿದ್ದು, ಪರಿಸರ ಪ್ರಶಸ್ತಿಯನ್ನು ಅಣಕಿಸುವಂತಾಗಿದೆ!

ಕೆಲವರು ರಾತ್ರಿ ವೇಳೆ ರಸ್ತೆ ಬದಿ ಕಸ ಬಿಸಾಡುತ್ತಿದ್ದರೆ, ಇನ್ನೂ ಕೆಲವರಂತು ಹಗಲಲ್ಲೇ ಬಿಸಾಡುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಕಂಡೂ ಕಾಣದಂತಿದ್ದರೆ, ನಗರವಾಸಿಗಳು ಮೂಗುಮುಚ್ಚಿಕೊಂಡು ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ!.

ಪೌರಕಾರ್ಮಿಕರಿಂದ ಹಸಿ-ಒಣ ಕಸ ಬೇರ್ಪಡಿಸುವ ಕಾರ್ಯ ಆಗುತ್ತಿಲ್ಲ. ಜತೆಗೆ ಕಸ ಸಂಗ್ರಹಣೆ ಮನೆಗಳ ಬಳಿಗೆ ಬಾರದ ಆರೋಪಗಳು ಕೇಳಿ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಮನೆಗಳ ತ್ಯಾಜ್ಯ ರಸ್ತೆ ಬದಿ ಬಂದು ಬೀಳುತ್ತಿದೆ. ಸಂಗ್ರಹಿಸುವ ಕಸವನ್ನೂ ರಸ್ತೆ ಪಕ್ಕದಲ್ಲಿ ಹಾಕುತ್ತಿದ್ದು, ವಿಲೇವಾರಿಯಾಗದೆ ರಾಶಿಯೇ ಬಿದ್ದಿದ್ದು ಅಲ್ಲಿಯೇ ಕೊಳೆಯುತ್ತಿದೆ.

ಇದರೊಂದಿಗೆ ಹೋಟೆಲ್, ಕೋಳಿ ತ್ಯಾಜ್ಯಗಳನ್ನು ಪ್ಲಾಸ್ಟಿಕ್, ಚೀಲಗಳಲ್ಲಿ ಸುರಿಯುತ್ತಿದ್ದರೂ ಮೌನವಾಗಿರುವ ಅಧಿಕಾರಿಗಳಿಗೆ ಚಾಟಿ ಬೀಸಬೇಕಾಗಿದ್ದ ಜನಪ್ರತಿನಿಧಿಗಳು ಚಕಾರವೆತ್ತದೆ ಸುಮ್ಮನಿದ್ದು, ಚಿಂತಾಮಣಿಯನ್ನು ಕಸದ ನಗರವನ್ನಾಗಿಸುತ್ತಿದ್ದಾರೆ ಎನ್ನುತ್ತಾರೆ ನಿವಾಸಿಗಳು.

ರಂಗೋಲಿ ಜಾಗೃತಿ ವಿಲ : ರಸ್ತೆಗಳ ಬದಿಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ನಗರಸಭೆ ಆ ಜಾಗಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ಈ ಜಾಗೃತಿಯೂ ವಿಲವಾಗಿದ್ದು, ರಂಗೋಲಿ ಹಾಕಿದವರೇ ಕಸ ಸುರಿದಿರುವ ನಿದರ್ಶನಗಳು ಸಾಕಷ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net