ಕಸದ ತೊಟ್ಟಿಯಾಗಿದ್ದ ತಾಣಕ್ಕೆ ಕಲಾತ್ಮಕತೆಯ ಸ್ಪರ್ಶ

manju-2 (1)
Published on

ಮಂಜುನಾಥ ಟಿ.ಭೋವಿ ಮೈಸೂರು
ಅಂದು ಕಸದ ತೊಟ್ಟಿಯಾಗಿದ್ದ ಜಾಗ ಇಂದು ಸುಂದರ ತಾಣ…!

ಈ ರೀತಿ ಒಂದು ಕಡೆ ಮಾತ್ರ ಮಾಡಿರುವುದಲ್ಲ, ಬದಲಿಗೆ ನಗರದ 65 ಕಡೆ ಆಕರ್ಷಣೀಯ ತಾಣವಾಗಿ ಪರಿವರ್ತನೆ ಮಾಡಲಾಗಿದೆ. ಇದಕ್ಕೆ ಕಲಾತ್ಮಕತೆಯ ಸ್ಪರ್ಶವನ್ನೂ ನೀಡಲಾಗಿದೆ. ಇದು ಸ್ವಚ್ಛನಗರಿ ಮೈಸೂರಿನ ಹಿರಿಮೆಗೆ ಗರಿಯಾಗಿದೆ. ಹಾಳುಕೊಂಪೆಗಳು ನಳನಳಿಸುವ ಮೂಲಕ ಗಮನ ಸೆಳೆಯುತ್ತಿವೆ.

ಕೈ ಹಿಡಿದ ಪ್ರಯೋಗ:
ನಗರದ ಕೆಲ ವೃತ್ತಗಳು, ಪಾದಚಾರಿ ಮಾರ್ಗ, ಕಾರ್ನರ್ ಜಾಗ ಕಸದ ತೊಟ್ಟಿಗಳಾಗಿದ್ದವು. ಈ ಸ್ಥಳಗಳಲ್ಲಿ ಸಾರ್ವಜನಿಕರು ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದರು. ಇದರಿಂದ ಕಸದ ರಾಶಿಯೇ ಸೃಷ್ಟಿಯಾಗುತ್ತಿತ್ತು. ಕೊಳೆತ ಕಸದಿಂದ ದುರ್ನಾತ ಬೀರುತ್ತಿತ್ತು. ಅಲ್ಲದೆ, ಕೆಲ ಸ್ಥಳಗಳು ಬಯಲು ಮೂತ್ರಾಲಯವೂ ಆಗಿದ್ದವು. ನೈಸರ್ಗಿಕ ಕ್ರಿಯೆಯನ್ನು ಪೂರೈಸಿಕೊಳ್ಳಲು ಇಂತಹ ಜಾಗಗಳನ್ನು ಕೆಲವರು ಬಳಕೆ ಮಾಡಿಕೊಳ್ಳುತ್ತಿದ್ದರು. ಇಲ್ಲಿಯ ಈ ಅನೈರ್ಮಲ್ಯದಿಂದಾಗಿ ಮೂಗು ಮುಚ್ಚಿಕೊಂಡು ಹೋಗುವ ದುಸ್ಥಿತಿ ನಿರ್ಮಾಣವಾಗಿತ್ತು. ಇದು ಅಕ್ಕಪಕ್ಕದ ಸಾರ್ವಜನಿಕರಿಗೆ, ದಾರಿಹೋಕರಿಗೆ ಅಸಹನೀಯವಾಗಿತ್ತು.

ಈ ಕುರಿತು ಪಾಲಿಕೆಗೆ ಅನೇಕ ದೂರುಗಳು ಹೋಗಿದ್ದವು. ಪೌರಕಾರ್ಮಿಕರು ಕಸವನ್ನು ತೆರವುಗೊಳಿಸಿ, ಸ್ವಚ್ಛ ಮಾಡಿ ಹೋಗುತ್ತಿದ್ದರು. ಮತ್ತೆ ಜನರು ಕಸ ತಂದು ಹಾಕಿ ಅದೇ ಅನೈರ್ಮಲ್ಯ ತಾಣವನ್ನು ಮರು ಸೃಷ್ಟಿಸಿ ಹೋಗುತ್ತಿದ್ದರು. ದಂಡ, ಕ್ರಮ ಪ್ರಯೋಗವೂ ಪ್ರಯೋಜನಕ್ಕೆ ಬಂದಿರಲಿಲ್ಲ. ಇದರಿಂದ ರೋಸಿಹೋಗಿದ್ದ ಮೈಸೂರು ಮಹಾನಗರ ಪಾಲಿಕೆ ಹೊಸ ಉಪ ಕ್ರಮವನ್ನು ಕಂಡುಕೊಂಡಿದ್ದು, ಇದೀಗ ಅದು ಫಲ ಕೊಟ್ಟಿದೆ.

ಕಲಾತ್ಮಕತೆಯ ಸ್ಪರ್ಶ:
ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದು, ಮೂತ್ರ ವಿಸರ್ಜನೆ ಮಾಡುವುದು, ಉಗುಳುವುದನ್ನು ತಡೆಯಲು ದೇವರ ಫೋಟೋ ಬಳಕೆ ಮಾಡಿರುವುದು ಅಲ್ಲಲ್ಲಿ ಕಂಡುಬರುತ್ತದೆ. ಇದಕ್ಕಿಂತ ಕೊಂಚ ವಿಭಿನ್ನವಾಗಿ ಯೋಚಿಸಿರುವ ಪಾಲಿಕೆ ಅನೈರ್ಮಲ್ಯ ತಾಣಕ್ಕೆ ಕಲಾತ್ಮಕತೆಯ ಸ್ಪರ್ಶವನ್ನು ಕೊಟ್ಟಿದೆ. ಇಂತಹ ಸ್ಥಳಗಳನ್ನು ಕೃತಕ ಉದ್ಯಾನ, ಮಕ್ಕಳ ಆಟದ ತಾಣವನ್ನಾಗಿ ಪರಿವರ್ತನೆ ಮಾಡಿದೆ. ಇನ್ನೂ ಕೆಲ ಕಡೆ ಗೋಡೆಗಳಲ್ಲಿ ಚಿತ್ರಕಲೆಯ ಚಿತ್ತಾರ ಮೂಡಿಸಿದೆ. ಅಂದ ಚಂದದ ತಾಣವಾಗಿ ಪರಿವರ್ತನೆ ಮಾಡಲಾಗಿದೆ. ಇಂತಹ ಕಡೆ ಕಸ ಹಾಕಲು ಸಾರ್ವಜನಿಕರಿಗೆ ಮನಸ್ಸು ಬರುತ್ತಿಲ್ಲ. ಪಾಲಿಕೆಯ ವಿಭಿನ್ನ ಪ್ರಯೋಗ ಕೈಹಿಡಿದಿದೆ.
ತ್ಯಾಜ್ಯ ಸುರಿಯುತ್ತಿದ್ದ ರಸ್ತೆ ಬದಿಯ ಜಾಗವನ್ನು ಫುಟ್‌ಪಾತ್ ಆಗಿ ಅಭಿವೃದ್ಧಿಪಡಿಸಲಾಗಿದೆ. ಫುಟ್‌ಪಾತ್ ಬಳಿ ಇರುವ ಗೋಡೆಗಳಲ್ಲಿ ಬಣ್ಣದ ಚಿತ್ತಾರ ಬಿಡಿಸಲಾಗಿದೆ. ಫುಟ್‌ಪಾತ್‌ನಲ್ಲಿ ಬಣ್ಣದ ರಂಗೋಲಿ ಹಾಕಲಾಗಿದೆ. ಈ ಉಪಕ್ರಮ ಆಕರ್ಷಣೀಯವಾಗಿದೆ. ಜತೆಗೆ, ಹೂಕುಂಡಗಳು ಹಾಗೂ ಕಲ್ಲಿನ ಬೆಂಚುಗಳನ್ನು ಇಟ್ಟು ಜನರು ಸಮಯ ಕಳೆಯುವ ಸ್ಥಳವಾಗಿ ಬದಲಾಯಿಸಲಾಗಿದೆ.

ಇದೀಗ ಸ್ವರೂಪವೇ ಬದಲು:
ಈ ಕ್ರಮದಿಂದ ಮೈಸೂರು ನಗರದಲ್ಲಿ ಕಸ ಎಸೆಯುತ್ತಿದ್ದ ತ್ಯಾಜ್ಯದ ಸ್ಥಳಗಳ ಸ್ವರೂಪವೇ ಈಗ ಪರಿವರ್ತನೆಗೊಂಡಿದೆ. ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಸ್ಥಳಗಳು ವಾಯುವಿಹಾರಿಗಳಿಗೆ ವಿಶ್ರಾಂತಿ ತಾಣವಾಗಿವೆ. ನಗರದಲ್ಲಿ ತ್ಯಾಜ್ಯದ ಕೊಂಪೆಯಾಗಿದ್ದ 65 ಸ್ಥಳಗಳು ಸುಂದರ ತಾಣವಾಗಿ ಉನ್ನತೀಕರಣಗೊಂಡಿವೆ. ತ್ಯಾಜ್ಯಮುಕ್ತ ಮೈಸೂರು ನಗರ ನಿರ್ಮಾಣದತ್ತ ಮೈಸೂರು ಮಹಾನಗರ ಪಾಲಿಕೆ ನಿರ್ಧಾರಕ್ಕೆ ಇದು ಪೂರಕವಾಗಿದೆ. ಈ ರೀತಿ ಅಭಿವೃದ್ಧಿಗೊಂಡಿರುವ ಸ್ಥಳಗಳಲ್ಲಿ ಸಾರ್ವಜನಿಕರು ಕಸ ಹಾಕುವುದನ್ನು ನಿಲ್ಲಿಸಿದ್ದಾರೆ.

ಕಸಮುಕ್ತ ಸ್ಥಳಗಳು ಯಾವುವು?:
ನಗರದಲ್ಲಿ 65 ಕಡೆ ಇದ್ದ ಅನೈರ್ಮಲ್ಯ ತಾಣಗಳನ್ನು ಕಸಮುಕ್ತ ಮಾಡಿ ಸುಂದರಗೊಳಿಸಲಾಗಿದೆ. ಆ ಸ್ಥಳಗಳೆಂದರೆ, ವಿದ್ಯಾರಣ್ಯಪುರಂ ಸಂತಜೋಸೆಫ್ ಶಾಲೆ ಹಿಂಭಾಗ, ಕುರುಬಾರಹಳ್ಳಿ ಸ್ಮಶಾನದ ಮುಂಭಾಗ, ಗೌರಿಶಂಕರ ಮುಖ್ಯರಸ್ತೆ, ಕಂಸಾಳೆ ಮಹದೇವಯ್ಯ ವೃತ್ತದ ಸಾರ್ವಜನಿಕ ಶೌಚಗೃಹದ ಹಿಂಭಾಗ, ಶ್ಯಾಂ ಸ್ಟುಡಿಯೋ ಹತ್ತಿರ, ಅಶೋಕಪುರಂ ಅಂಗನವಾಡಿ ಎದುರು, ದಿವಾನ್ಸ್ ರಸ್ತೆ, ಹೊಸಕೇರಿ 1ನೇ ಕ್ರಾಸ್, ಸೀತಾರಾಮ ರಸ್ತೆ, ಅಗ್ರಹಾರ ವೃತ್ತದ ಟಾಂಗಾ ನಿಲ್ದಾಣ, ಕುಕ್ಕರಹಳ್ಳಿ ಕೆರೆ ಉದ್ಯಾನ ಹತ್ತಿರ, ನಾರಾಯಣಸ್ವಾಮಿ ಬ್ಲಾಕ್ ಹತ್ತಿರ, ಹರಿಹರ ಹೋಟೆಲ್ ಹತ್ತಿರ, ಟ್ಯಾಂಕ್ ಬಂಡ್ ರಸ್ತೆ, ವಿವಿ ಮೊಹಲ್ಲಾದ 2ನೇ ಮೇನ್ ವೈಟ್‌ಹೌಸ್ ಹತ್ತಿರ, ಜಯಲಕ್ಷ್ಮೀಪುರಂ ಚಿನ್ಮಯಿ ಶಾಲೆಯ ಹತ್ತಿರ, ಲಕ್ಷ್ಮೀಕಾಂತನಗರ ಸಮುದಾಯ ಭವನ ಮುಂಭಾಗ, ಮುಡಾ ಮಾರುಕಟ್ಟೆ ಮುಂಭಾಗ, ವಿಜಯನಗರ 2ನೇ ಹಂತದ ಹೊಯ್ಸಳ ವೃತ್ತ, ವಿಜಯನಗರ 2ನೇ ಹಂತದ 19ನೇ ಮುಖ್ಯರಸ್ತೆ, ಮಥುರ ಉದ್ಯಾನ ಮುಂಭಾಗ, ಮಾನಂದವಾಡಿ ರಸ್ತೆ, ತರಳಬಾಳು ಶಾಲೆ ಹಿಂಭಾಗ, ಶಾರದಾದೇವಿನಗರ ಹೈಟೆನ್ಷನ್ ಉದ್ಯಾನ ಹತ್ತಿರ, ಜೆ.ಪಿ.ನಗರ ಆಟದ ಮೈದಾನ, ಗೋಕುಲಂ ಹಸು-ಕರು ಉದ್ಯಾನ ಹತ್ತಿರ, ಯಾದವಗಿರಿ ರೈಲ್ವೆ ಟ್ರ್ಯಾಕ್ ಹತ್ತಿರ, ಯಾದವಗಿರಿ ಪರಮಹಂಸ ರಸ್ತೆ ಕಸಮುಕ್ತಗೊಂಡಿವೆ.

2.7 ಕೋಟಿ ರೂ. ಖರ್ಚು:

ತ್ಯಾಜ್ಯ ಹಾಕುವ ಸ್ಥಳವನ್ನು ಕಸ ಮುಕ್ತಗೊಳಿಸಲು ಪ್ರತಿ ವಲಯ ಕಚೇರಿಗೆ 30 ಲಕ್ಷ ರೂ.ನಂತೆ 2.7 ಕೋಟಿ ರೂ. ಅನುದಾನದಲ್ಲಿ 65 ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪ್ರಯೋಗ ಯಶಸ್ವಿಗೊಂಡಿರುವುದರಿಂದ ಪಾಲಿಕೆಯು ಎಲ್ಲ ವಾರ್ಡ್‌ಗಳಲ್ಲಿ ಮತ್ತಷ್ಟು ತ್ಯಾಜ್ಯ ಹಾಕುವ ಸ್ಥಳಗಳನ್ನು ಗುರುತಿಸಲು ಮುಂದಾಗಿದ್ದು, 2ನೇ ಹಂತದಲ್ಲಿ ಇವುಗಳನ್ನು ಅಂದದ ತಾಣವಾಗಿ ಮಾಡಲು ಕ್ರಮ ವಹಿಸಿದೆ. ಜತೆಗೆ, ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲು ಪಾಲಿಕೆ ಮುಂದಾಗಿದೆ.

ನಗರದ ಹಲವಾರು ಸ್ಥಳಗಳಲ್ಲಿ ಕಸದ ರಾಶಿ ರಾರಾಜಿಸುತ್ತಿತ್ತು. ಇದನ್ನು ಸ್ವಚ್ಛಗೊಳಿಸಿದರೂ ಮರು ದಿನವೇ ಅದೇ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತ್ಯಾಜ್ಯವನ್ನು ಸುರಿಯುತ್ತಿರುವ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಸೌಂದರ್ಯರೀಕರಣಗೊಳಿಸಲಾಗಿದೆ. ಈ ಮೂಲಕ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net