ಕಸಕ್ಕೆ ಹಾಕಿದ ಬೆಂಕಿ ಆಶ್ರಮ ಶಾಲೆ ವಿದ್ಯಾರ್ಥಿಗೆ ತಗುಲಿ ಗಾಯಗೊಳಿಸಿತು

IMG-20200130-WA0019.jpg
Published on

ಹಳೇಬೀಡು: ಇಲ್ಲಿಗೆ ಸಮೀಪದ ನರಸೀಪುರ ಗ್ರಾಮದ ಆಶ್ರಮ ವಸತಿ ಶಾಲೆಯ ವಿದ್ಯಾರ್ಥಿ ಧನಂಜಯ ಎಂಬ ಬಾಲಕನಿಗೆ ಬೆಂಕಿ ಅವಘಡದಲ್ಲಿ ತೀವ್ರ ಸುಟ್ಟ ಗಾಯವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಾಸ್ಟೆಲ್ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ದೂರಲಾಗಿದ್ದು, ೯ ವರ್ಷದ ಧನಂಜಯನನ್ನು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

ಇತ್ತೀಚೆಗೆ ಗ್ರಾಮದ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಯ ಆವರಣದಲ್ಲಿ ಬಿದ್ದಿದ್ದ ಕಸವನ್ನು ಗುಡಿಸಿ ಒಂದೆಡೆ ಪೇರಿಸಿ ಬೆಂಕಿ ಹಾಕುವಂತೆ ಹಾಸ್ಟೆಲ್ ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು ಎನ್ನಲಾಗಿದೆ. ಬೆಂಕಿ ಹಚ್ಚಿದಾಗ ಅದರ ಉರಿ ವ್ಯಾಪಿಸಿ ಹತ್ತಿರದಲ್ಲಿದ್ದ ವಿದ್ಯಾರ್ಥಿಗಳಿಗೆ ಸೋಕಿದೆ. ಮಿಕ್ಕ ಬಾಲಕರು ಓಡುವ ಸಂದರ್ಭ ಧನಂಜಯನಿಗೆ ಬೆಂಕಿ ತಗುಲಿ ಹೆಚ್ಚಿನ ಸುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಭೇಟಿ ನೀಡಿದ್ದ ತಾಪಂ ಅಧ್ಯಕ್ಷ ರಂಗೇಗೌಡ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್, ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿ, ಕರ್ತವ್ಯ ಲೋಪ ಎಸಗಿರುವ ಅಡುಗೆ ಸಿಬ್ಬಂದಿ ಹಾಗೂ ವಾರ್ಡನ್ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಡಾ. ನರಸೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net