ಕಸ ಸುರಿಯುವ ತಾಣವಾಗಿದೆ ಹಳಕಾರ್!

1KMT1
Published on

ಶಂಕರ ಶರ್ಮಾ ಕುಮಟಾ

ತಾಲೂಕಿನ ಹಳಕಾರ್ ಗ್ರಾಮ ಅರಣ್ಯ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವವರ ಕಾಟ ಹೆಚ್ಚಾಗಿದೆ. ಇಲ್ಲಿನ ರಸ್ತೆ, ಗಟಾರ್​ಗಳು ಕಸ ಹಾಗೂ ಅಪಾಯಕಾರಿ ತ್ಯಾಜ್ಯದಿಂದ ತುಂಬಿಹೋಗಿವೆ.

ಸ್ವಾತಂತ್ರ್ಯೊತ್ತರ ಚಾಲ್ತಿಯಲ್ಲಿರುವ ದೇಶದ ಏಕೈಕ ಗ್ರಾಮ ಅರಣ್ಯ ಪಂಚಾಯಿತಿ ನಮ್ಮದು ಎಂದು ಹಳಕಾರ ಗ್ರಾಮಸ್ಥರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಲ್ಲದೆ, ಇದಕ್ಕೆ ತಕ್ಕಂತೆ ಅರಣ್ಯ ಪಂಚಾಯಿತಿಯನ್ನು ನಡೆಸಿಕೊಂಡು ಬಂದಿದ್ದು ಊರಿನ ಅಮೂಲ್ಯ ಅರಣ್ಯ ಸಂಪತ್ತನ್ನು ಉಳಿಸಿ, ಬೆಳೆಸುವ ಎಲ್ಲ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ವಿಶೇಷ ಔಷಧ ಸಸ್ಯ ವನವೂ ಸಿದ್ಧಗೊಳ್ಳುತ್ತಿದೆ.

ಆದರೆ, ನಾಡು ಬೆಳೆದು, ಜನಸಂಖ್ಯೆ ಮಿತಿ ಮೀರಿ, ಹಳ್ಳಿಗಳು ಕೂಡ ಶಹರದ ಥಳಕು ಬಳಕನ್ನು ರೂಢಿಸಿಕೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ ಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆ ದೊಡ್ಡದಾಗಿದೆ. ಬಹುಪಾಲು ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿಯ ವ್ಯವಸ್ಥೆ ಇಲ್ಲ. ಹೀಗಾಗಿ, ಕುಮಟಾದಂತಹ ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ಪಟ್ಟಣದ ಅಂಚಿನ ಹಸಿರು ವನಗಳು ವಾಯುವಿಹಾರಕ್ಕೆ, ಪರಿಸರದ ಲಾಭ ಪಡೆಯುವುದಕ್ಕೆ ಉಪಯೋಗವಾಗುವ ಬದಲು, ಯಾರಿಗೂ ಕಾಣದಂತೆ ಕಸ ಎಸೆದು ಹೋಗುವುದಕ್ಕೆ ಅನುಕೂಲಕರ ಜಾಗ ಎಂಬಂತಾಗಿದೆ.

ಹೆಗಡೆ ರಸ್ತೆಯಲ್ಲಿ ವಿವೇಕನಗರದಿಂದ ಹಳಕಾರ್ ಮಾರ್ಗದಲ್ಲಿ ಹಾಗೂ ಹೆಗಡೆ ರೈಲ್ವೆ ಗೇಟ್​ನಿಂದ ಹಳಕಾರ್ ಮತ್ತು ನೆಹರುನಗರ ಮಾರ್ಗದಲ್ಲಿ ಹಚ್ಚ ಹಸಿರಿನ ಪ್ರಶಾಂತ ವಾತಾವರಣ ಕಸದಿಂದ ತುಂಬುತ್ತಿದೆ. ಅರಣ್ಯದ ನಡುವೆ ಹಾದು ಹೋಗುವ ಕೊಂಕಣ ರೈಲು ಮಾರ್ಗದ ಒಂದು ಬದಿಯ ರಸ್ತೆಯಲ್ಲಿ ವಾಕಿಂಗ್ ಮಾಡುವ ನೂರಾರು ಮಂದಿ ಕಣ್ಣು-ಮೂಗು ಮುಚ್ಚಿ ಓಡಾಡಬೇಕಿದೆ. ಕಳೆದ 2-3 ವರ್ಷದಿಂದ ಇಲ್ಲಿನ ರಸ್ತೆಯ ಬದಿಗಳಲ್ಲಿ ಹತ್ತಾರು ಲಾರಿ ತುಂಬುವಷ್ಟು ಕಸ, ತ್ಯಾಜ್ಯ ನಿರಂತರ ಬೀಳುತ್ತಲೇ ಇದೆ. ರಾತ್ರಿ ಎಲ್ಲೆಲ್ಲಿಂದಲೋ ವಾಹನಗಳಲ್ಲಿ ತುಂಬಿಕೊಂಡು ಬಂದು ಸುರಿದು ಹೋಗುತ್ತಾರೆ. ದ್ವಿಚಕ್ರ ವಾಹನ ಸವಾರರಂತೂ ಚಲಿಸುತ್ತಿರುವಾಗಲೇ ಕಸದ ಚೀಲ ಎಸೆದು ವೇಗವಾಗಿ ಸಾಗಿಬಿಡುತ್ತಾರೆ. ಇತರ ಹೊಲಸು ತ್ಯಾಜ್ಯಗಳ ಜೊತೆಗೆ ಇತ್ತೀಚೆಗೆ ಔಷಧ ಹಾಗೂ ಆಸ್ಪತ್ರೆಯ ತ್ಯಾಜ್ಯಗಳು ಕೂಡ ಬಂದು ಬೀಳುತ್ತಿವೆ ಎಂದು ಸಾರ್ವಜನಿಕರು ‘ವಿಜಯವಾಣಿ’ ಎದುರು ಸಮಸ್ಯೆ ಬಿಚ್ಚಿಟ್ಟಿದ್ದಾರೆ.

ನಮ್ಮ ಹಳಕಾರ್ ಬೆಟ್ಟದಲ್ಲಿ ಕೊಂಕಣ ರೈಲು ಹಳಿಯಂಚಿನ ರಸ್ತೆಯಲ್ಲಿ ಬಹಳಷ್ಟು ಕಸ ಹಾಗೂ ತ್ಯಾಜ್ಯ ರಾಶಿ ಬೀಳುತ್ತಿದೆ. ಈ ರಸ್ತೆ ರೈಲ್ವೆಯವರದ್ದು. ಕಸ ಮಳೆಗಾಲದಲ್ಲಿ ಬೆಟ್ಟ ಸೇರಿ ಪುನಃ ಊರೊಳಗೆ ಬರುತ್ತಿದೆ. ಹಲವು ಬಾರಿ ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿದ್ದೇವೆ. ಜನ ಕಸ ಹಾಕುವುದನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಪೊಲೀಸರಿಗೆ ದೂರು ನೀಡಿದ್ದೇವೆ. ಕಸ ಎಸೆಯುವ ವಾಹನ ಸಮೇತ ಮುಟ್ಟುಗೋಲು ಹಾಕಿಕೊಳ್ಳುವ ಎಚ್ಚರಿಕೆ ಫಲಕವನ್ನೂ ಹಾಕಿದ್ದೇವೆ. ಆದರೂ ಪ್ರಯೋಜನವಾಗದೇ ಇರುವುದಕ್ಕೆ ನೊಂದು ಬೇಸತ್ತು ಹೋಗಿದ್ದೇವೆ. ಕಸ ಎಸೆದಿದ್ದು ಕಂಡರೆ ಖಂಡಿತವಾಗಿಯೂ ಬಿಡುವುದಿಲ್ಲ. | ನಾಗರಾಜ ಭಟ್ಟ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ ಅಧ್ಯಕ್ಷ

ಇಲ್ಲಿ ಸಾರ್ವಜನಿಕರು ಬೇಕಾಬಿಟ್ಟಿ ಕಸ ಎಸೆಯುವುದನ್ನು ಗ್ರಾಮ ಅರಣ್ಯ ಪಂಚಾಯಿತಿಯವರು ಕಟ್ಟುನಿಟ್ಟಾಗಿ ನಿಗಾ ವಹಿಸಿ ಕಸ ಎಸೆಯುವವರಿಗೆ ಬಿಸಿ ಮುಟ್ಟಿಸಬೇಕು. | ಸುಜಿತ್ ಗುನಗಾ ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net