

ಔರಾದ್: ಪಟ್ಟಣದಲ್ಲಿ ಕಳೆದ ೨೦ದಿನದಿಂದ ಕಸ ಸಂಗ್ರಹಿಸುವ ವಾಹನಗಳು ಸ್ಥಗಿತಗೊಂಡಿದ್ದು, ಕಸ ವಿಲೇವಾರಿ ಆಗುತ್ತಿಲ್ಲ ಎಂದು ಸಮಾಜ ಸೇವಕ ಗುರುನಾಥ ವಡ್ಡೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಕಸ ಸಂಗ್ರಹಿಸುವ ವಾಹನಗಳು ಸ್ಥಗಿತವಾದ್ದರಿಂದ ಕಸ ಮನೆಯಲ್ಲಿಯೇ ಸಂಗ್ರಹಿಸಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಕೆಲವರು ರಸ್ತೆ ಮೇಲೆ ಕಸ ಬಿಸಾಡುತ್ತಿದ್ದಾರೆ. ಪಟ್ಟಣ ಪಂಚಾಯತಿಯವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ವಚ್ಛ ಭಾರತ ಅಭಿಯಾನ ಸಂಪೂರ್ಣ ದೇಶದಲ್ಲಿ ನಡೆಯುತ್ತಿದ್ದರೂ ಔರಾದ್‌ನಲ್ಲಿ ಕಸ ಸಂಗ್ರಹಿಸುತ್ತಿಲ್ಲ. ಇದರಿಂದ ಪಟ್ಟಣದಲ್ಲಿ ರಸ್ತೆ ಮೇಲೆ ಕಸ ಸಂಗ್ರಹವಾಗುತ್ತಿದೆ.
ಇದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಪಟ್ಟಣ ಪಂಚಾಯಿತಿ ಕರ್ತವ್ಯ ಭ್ರಷ್ಟತೆ ಹಾಗೂ ಸರ್ಕಾರದ ಕೆಲಸದಲ್ಲಿನ ನಿರ್ಲಕ್ಷ್ಯದ ಬಗ್ಗೆ ಸಮಗ್ರ ತನಿಖೆ ನಡೆಸುವುದು ಹಾಗೂ ಔರಾದ್ ಪಟ್ಟಣದಲ್ಲಿ ಕಸ ವಿಲೇವಾರಿ ಮಾಡುವ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕಾಗಿ ಸಮಾಜ ಸೇವಕ ಗುರುನಾಥ ವಡ್ಡೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.