

ಹಾಸನ: ಅಗಿಲೆ ಗ್ರಾಮದ ಬಳಿ ನಾಯಿಗಳ ದಾಳಿಗೆ ಹಸು ಬಲಿಯಾಗಿ ಒಂದು ದಿನ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದನ್ನು ಖಂಡಿಸಿ ಜಕ್ಕೇನಹಳ್ಳಿ ಕೊಪ್ಪಲು ಹಾಗೂ ಸುತ್ತಮುತ್ತ ಗ್ರಾಮಸ್ಥರು ಕಸ ವಿಲೇವಾರಿ ಘಟಕದ ಮುಖ್ಯದ್ವಾರದ ಮುಂದೆ ಸೋಮವಾರ ಹಸುವಿನ ಮೃತದೇಹವಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಯಾವ ವಾಹನವು ಕಸ ಸುರಿಯಲು ಬಿಡದೇ ದಿಗ್ಭಂಧನ ಹಾಕಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥರಾದ ಜಾನಕಿ, ಅಗಿಲೆ ಬಳಿ, ಜಕ್ಕೇನಹಳ್ಳಿ ಕೊಪ್ಪಲು ಹತ್ತಿರ ಹಾಸನ ನಗರದ ಕಸವನ್ನು ತಂದು ಸುರಿಯುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಇಲ್ಲಿನ ಸುತ್ತಮುತ್ತ ಇರುವ ಹಸುಗಳು, ಕರುಗಳು, ಕುರಿ, ಕೋಳಿಗಳನ್ನು ತಿಂದು ಹಾಕುತ್ತಿವೆ. ನೆನ್ನೆ ನಾಯಿಗಳ ಗುಂಪು ಒಂದು ಹಸುವನ್ನು ಕೊಂದು ತಿಂದು ಹಾಕಿವೆ. ಆದರೂ ಯಾವ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕಸ ಸುರಿಯುವ ಜಾಗದ ಸುತ್ತ 400ಕ್ಕೂ ಹೆಚ್ಚು ನಾಯಿಗಳಿದ್ದು, ಮನುಷ್ಯರು ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಜನರ ಮೇಲೂ ನಾಯಿಗಳು ಆಕ್ರಮಣ ಮಾಡಿವೆ. ಈ ಭಾಗದ ಸುತ್ತ ಜೀವನ ಮಾಡುವುದೇ ಕಷ್ಟಕರವಾಗಿದೆ. ಹೊಲದಲ್ಲಿ ದನ-ಕರು, ಕುರಿಗಳು ಇದ್ದಾಗ ಗುಂಪಾಗಿ ನಾಯಿಗಳು ಬಂದು ದಾಳಿ ಮಾಡುತ್ತಿವೆ. ಇನ್ನು ಕಸದ ಗಲೀಜು ನೀರು ಹರಿದು ಬಂದು ಕುಡಿಯುವ ನೀರಿಗೂ ಸೇರುತ್ತಿದೆ. ದನ-ಕರುಗಳಿಗೂ ಕುಡಿಯಲು ಉತ್ತಮ ನೀರಿಲ್ಲ. ಕಸ ಸಂಗ್ರಹಿಸುವ ತಡೆ ಗೋಡೆ ಕೂಡ ಬಿದ್ದು ಹೋಗಿದೆ. ಇಲ್ಲಿ ಕಸ ಹಾಕುವುದು ಬೇಡ. ಬೇರೆ ಕಡೆ ಕಸ ಹಾಕಿ. ನಮ್ಮ ಊರಿನ ಒಳಗೆ ಕಸ ಹಾಕುವುದು ಬೇಡ ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಮಾತನಾಡಿ, ಇದೆ ರೀತಿ ಕಸ ಹಾಕಲು ಮುಂದಾದರೆ ನಾವು ದಯಾಮರಣವನ್ನು ರಾಷ್ಟ್ರಪತಿಗೆ ಪತ್ರ ಬರೆಯಬೇಕಾಗುತ್ತದೆ. ಈ ಭಾಗದಲ್ಲಿ ಮನುಷ್ಯರು ಬದುಕಲು ಸಾಧ್ಯವಿಲ್ಲ. ಜೀವ ಕೈಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಇದುವರೆಗೂ ನೂರಾರು ಸಾಕು ಪ್ರಾಣಿಗಳು ಈ ನಾಯಿಗಳಿಗೆ ಆಹಾರವಾಗಿವೆ. ಪ್ರಾಣಿಗಳ ಸಾವಿಗೆ ಸೂಕ್ತ ಪರಿಹಾರ ನೀಡಬೇಕು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಂದು ಸ್ಪಂದಿಸಬೇಕು. ಚುನಾವಣೆ ವೇಳೆ ರಾಜಕಾರಣಿಗಳು ಬಂದು ಮತ ಕೇಳುತ್ತಾರೆ. ಈಗ ನಮ್ಮ ಸಮಸ್ಯೆ ಕೇಳುವವರಿಲ್ಲ. ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡಬೇಕಾಗುತ್ತದೆ. ಈ ಕೂಡಲೇ ಈ ಕಸ ವಿಲೇವಾರಿ ಘಟಕ ಬಂದ್ ಮಾಡಬೇಕು. ಕಸ ವಿಲೇವಾರಿ ವಾಹನ ಇಲ್ಲಿಗೆ ಬರಬಾರದು. ಏನಾದರೂ ಕಸ ಹಾಕಲು ಬಂದರೆ ಜಕ್ಕೇನಹಳ್ಳಿ ಮತ್ತು ಜಕ್ಕೇನಹಳ್ಳಿ ಕೊಪ್ಪಲು, ಅಗಿಲೆ, ಕಿತ್ತನೆ, ಅರಿವಿ ಕೊಪ್ಪಲು ಇತರೆ ಎಲ್ಲಾ ಗ್ರಾಮದ ಜನರು ಸೇರಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ರಂಗೇಗೌಡ ಜಯರಾಂ, ತಿಮ್ಮೇಗೌಡ, ಕಿಟ್ಟಿ, ಮಂಜಮ್ಮ, ಜಯಂತ್ ಇತರರು ಪಾಲ್ಗೊಂಡಿದ್ದ್ದರು.