

ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ, ಉತ್ಪಾದನೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಳಗಾವಿ ಮಹಾನಗರದಲ್ಲಿ ಇದೀಗ ಕಸ ನಿರ್ವಹಣೆಗೂ ಬಂತು ಹೈಟೆಕ್ ವ್ಯವಸ್ಥೆ!.
ಹೌದು. ಸೆನ್ಸಾರ್ ಒಳಗೊಂಡಿರುವ ಹೈಡ್ರಾಲಿಕ್ ಚಾಲಿತ ಅಂಡರ್‌ಗ್ರೌಂಡ್ ಡಸ್ಟ್ ಬಿನ್ (ಕಸದ ತೊಟ್ಟಿ) ಗಳು ತಲೆ ಎತ್ತಿವೆ. ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಹಸಿ ಕಸ, ಒಣ ಕಸ, ಇ-ಕಸ ಸೇರಿ ಹಲವಾರು ರೀತಿಯ ಕಸ ಸುಮಾರು 320 ಮೆಟ್ರಿಕ್ ಟನ್ ವರೆಗೆ ಕಸ ಉತ್ಪತ್ತಿಯಾಗುತ್ತಿದೆ. ಜನರು ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಕಸ ವಿಲೇವಾರಿ ಸಮರ್ಪಕವಾಗದೇ ರಸ್ತೆ ಪಕ್ಕದಲ್ಲಿ, ಖಾಲಿ ನಿವೇಶನಗಳಲ್ಲೂ ಹೆಚ್ಚಾಗಿ ಕಸ ಸುರಿಯಲಾಗುತ್ತಿದೆ. ಸಮರ್ಪಕವಾಗಿ ಕಸ ನಿರ್ವಹಣೆ, ಕಸ ಎತ್ತದಿರುವುದು, ಕಸ ತೊಟ್ಟಿಗಳನ್ನು ಅಳವಡಿಸದಿರುವುದು ವಿವಿಧ ಕಾರಣಗಳಿಂದಾಗಿ ಜನವಸತಿ ಪ್ರದೇಶಗಳಲ್ಲಿನ ಸಮಸ್ಯೆ ಉಂಟಾಗುತ್ತಿದೆ.
ನಗರದಲ್ಲಿ ಜನರು ಇಂತಹ ಸಮಸ್ಯೆಗಳಿಂದ ಮುಕ್ತಿ ಕೊಡಿಸುವ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ 18 ಕಡೆ ಹೈಟೆಕ್ ಸೌಲಭ್ಯ ಮತ್ತು ಸೆನ್ಸಾರ್ ಒಳಗೊಂಡಿರುವ ಡಸ್ಟ್‌ಬಿನ್‌ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಪ್ರತಿ ಡಸ್ಟ್‌ಬಿನ್‌ಗೆ 6.5 ಲಕ್ಷ ರೂ.ರಂತೆ 1.56 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ, ಈ ಡಸ್ಟ್‌ಬಿನ್‌ಗಳಲ್ಲಿ ಸಂಗ್ರಹವಾಗುವ ಕಸ ವಿಲೇವಾರಿ ಮಾಡಲು 80 ಲಕ್ಷ ರೂ. ವೆಚ್ಚದ ವಾಹನ ಜತೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 24 ಯೂನಿಟ್‌ಗಳ ಭೂಗತ ಸ್ಮಾರ್ಟ್ ಡಸ್ಟ್‌ಬಿನ್‌ಗಳ ಪೈಕಿ 18 ಡಸ್ಟ್‌ಬಿನ್ ಅಳವಡಿಸಲಾಗಿದೆ. ಬಾಕಿ 6 ಯೂನಿಟ್‌ಗಳ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಫಿನಿಶಿಂಗ್ ಮತ್ತು ಪೇಂಟಿಂಗ್ ಮಾಡಲಾಗುತ್ತಿದೆ. ದಕ್ಷಿಣ ವಲಯದಲ್ಲಿ 18 ಘಟಕಗಳ ಸ್ಥಾಪನೆ ಪೂರ್ಣಗೊಳಿಸಲಾಗಿದೆ. ಉತ್ತರ ವಲಯದ 6 ಕಡೆ ಸ್ಥಾಪಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುವ ಪ್ರದೇಶಗಳಲ್ಲಿ ಸ್ಮಾರ್ಟ್ ಡಸ್ಟ್‌ಬಿನ್‌ಗಳನ್ನು ಹಾಕಲಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಸ ನಿರ್ವಹಣೆ ಕೂಡ ಸಮರ್ಪಕವಾಗಿ ನಡೆಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.