ಕಷ್ಟುಪಟ್ಟು ಬೆಳೆದ ಭತ್ತ ಜೊಳ್ಳು

3blrp1
Published on

ಬೇಲೂರು: ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಭತ್ತದ ಫಸಲು ಸಂಪೂರ್ಣ ಜೊಳ್ಳು ಬಂದಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.

ಕೆಲ ತಿಂಗಳ ಹಿಂದೆ ಉತ್ತಮವಾಗಿ ಸುರಿದ ಮಳೆಗೆ ಗ್ರಾಮದ ಸಿದ್ದೇಶಪ್ಪ, ರಾಜಪ್ಪ, ವಿರೂಪಾಕ್ಷ, ಈಶ್ವರಪ್ಪ, ಬಸವರಾಜ್, ಮಂಜಪ್ಪ, ಸಂಗನಯ್ಯ, ಸತೀಶ್, ಪುಟ್ಟಸ್ವಾಮಿ, ಗಂಗಯ್ಯ, ಚಂದ್ರೇಗೌಡ, ಗಂಗಮ್ಮ, ಗೌರಮ್ಮ ಸೇರಿದಂತೆ 20ಕ್ಕೂ ಹೆಚ್ಚಿನ ರೈತರು ಖಾಸಗಿ ಕಂಪನಿಯ ಭತ್ತದ ಬಿತ್ತನೆ ಬೀಜ ಖರೀದಿಸಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಆದರೀಗ ಭತ್ತದ ಕಟಾವಿಗೆ ಮುಂದಾದರೆ ಫಸಲು ಇಲ್ಲದಿರುವುದನ್ನು ಕಂಡು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಸಂಬಂಧ ಭತ್ತದ ಬಿತ್ತನೆ ಬೀಜ ಖರೀದಿಸಿದ್ದ ಖಾಸಗಿ ಅಂಗಡಿಗೆ ತೆರಳಿ ರೈತರು ವಿಚಾರಿಸಿದಾಗ ಮಾಲೀಕರು ಉಡಾಫೆಯಿಂದ ಉತ್ತರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು, ನಷ್ಟ ಭರಿಸಿಕೊಡುವಂತೆ ಮಾಲೀಕನನ್ನು ಒತ್ತಾಯಿಸಿದರು. ಆದರೆ ಅಂಗಡಿ ಮಾಲೀಕ, ‘ನೀವು ಬೇಕಿದ್ದರೆ ಕಂಪನಿ ವಿರುದ್ಧ ನ್ಯಾಯಾಲಯಕ್ಕೆ ಹೋಗಿ. ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದು ನುಣುಚಿಕೊಂಡಿದ್ದಾರೆ. ಇದರಿಂದ ಬೇಸತ್ತ ರೈತರು, ನೇರವಾಗಿ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅಂಗಡಿಯವರ ವಿರುದ್ಧ ದೂರು ನೀಡಿದ್ದಾರೆ.

ಈ ಸಂಬಂಧ ಅಧಿಕಾರಿಗಳು ಮೂರು ದಿನದಲ್ಲಿ ಸಂಬಂಧಿಸಿದ ಕೃಷಿ ವಿಜ್ಞಾನಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ವಿಜ್ಞಾನಿಗಳು ಕಳಪೆ ಬಿತ್ತನೆ ಬೀಜ ಎಂದು ಪ್ರಯಾಣಪತ್ರ ನೀಡಿದರೆ ರೈತರು ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹಾಕಿ ಪರಿಹಾರ ಪಡೆಯಬಹುದು ಎಂದು ಹೇಳಿದ್ದಾರೆ. ನಮಗೆ ನ್ಯಾಯ ಬೇಕು. ಪ್ರತಿ ಎಕರೆ ಭತ್ತ ನಾಟಿ ಮಾಡಲು 25 ಸಾವಿರ ರೂ. ಖರ್ಚಾಗಿದೆ. ಇದರೊಂದಿಗೆ ಕಾರ್ಮಿಕರ ಕೂಲಿ, ರಸಗೊಬ್ಬರ ಹೀಗೆ ವೆಚ್ಚ ಮಾಡಿದ ಹಣವನ್ನು ಪರಿಹಾರ ರೂಪದಲ್ಲಿ ಕೊಡಬೇಕು. ಇಲ್ಲದಿದ್ದರೆ ಕಚೇರಿ ಹಾಗೂ ಅಂಗಡಿ ಮಾಲೀಕರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ರೈತರು ಅಳಲು: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಅಳಲು ತೋಡಿಕೊಂಡಿರುವ ಬಲ್ಲೇನಹಳ್ಳಿ ಗ್ರಾಮದ ರೈತ ಸಿದ್ದೇಶಪ್ಪ, ಉತ್ತಮ ಮಳೆಯಿಂದ ಕೆರೆ ಕಟ್ಟೆಗಳು ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮದ 20ಕ್ಕೂ ಹೆಚ್ಚು ರೈತರು ಬೇಲೂರು ಪಟ್ಟಣದ ಖಾಸಗಿ ಅಂಗಡಿಯಲ್ಲಿ ಭತ್ತದ ತಳಿ ಖರೀದಿಸಿ ತಂದು ಬಿತ್ತನೆ ಮಾಡಿದ್ದೆವು. ಅಂಗಡಿ ಮಾಲೀಕ ಕೂಡ ಈ ತಳಿ ಉತ್ತಮ ಫಸಲು ಕೊಡುತ್ತದೆ ಎಂದಿದ್ದರು. ಆದರೀಗ ಬೆಳೆ ಕಟಾವು ಮಾಡಲು ಹೋದರೆ ಜೊಳ್ಳು ತುಂಬಿದೆ. ಈ ಬಗ್ಗೆ ಅಂಗಡಿ ಮಾಲೀಕನನ್ನು ಕೇಳಿದರೆ, ‘ಈಗಾ ನಾವೇನು ಮಾಡಲು ಸಾಧ್ಯವಿಲ್ಲ. ಬೇಕಿದ್ದರೆ ಕೋರ್ಟಿಗೆ ಹೋಗಿ’ ಎಂದು ಉಡಾಫೆಯಿಂದ ಉತ್ತರಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಲ್ಲೇನಹಳ್ಳಿ ಗ್ರಾಮದಲ್ಲಿ ರೈತರು ಬೆಳೆದ ಭತ್ತ ಫಸಲು ಬಿಡದೆ ಜೊಳ್ಳು ಜೊಳ್ಳಾಗಿದೆ ಎಂದು ರೈತರು ಖಾಸಗಿ ಅಂಗಡಿ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ. ಆದ್ದರಿಂದ ಇದು ಕಳೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಇಲಾಖೆಗೆ ವಿಜ್ಞಾನಿಗಳ ತಂಡ ಕಳುಹಿಸುವಂತೆ ಮನವಿ ಮಾಡಿದ್ದೇವೆ. ಅವರು ಶೀಘ್ರ ಬರುವ ನೀರೀಕ್ಷೆ ಇದೆ. ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಳಪೆ ಎಂದು ವರದಿ ಕೊಟ್ಟಲ್ಲಿ ರೈತರು ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರ ಪಡೆಯಬಹುದಾಗಿದೆ. ರೈತರು ಇಲಾಖೆಯಲ್ಲಿ ಬೆಳೆ ವಿಮೆ ಮಾಡಿಸಿದ್ದರೆ ಇಲಾಖೆಯಿಂದಲೂ ಪರಿಹಾರ ಪಡೆಯಬಹುದಾಗಿದೆ.
ಶಶಿಧರ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಬೇಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net