

ಚನ್ನರಾಯಪಟ್ಟಣ: ವಿದ್ಯಾರ್ಥಿಗಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯಗಳು, ಸಂಸ್ಕಾರ, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಛಲವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಛಲ, ಕಠಿಣ ಪರಿಶ್ರಮದ ಮೂಲಕ ಓದಬೇಕು. ಸದಾ ನಿಮ್ಮ ಮನಸ್ಸನ್ನು ಗುರಿಯೆಡೆಗೆ ಕೇಂದ್ರಿಕರಿಸಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ಕೊಡುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮುಖ್ಯವಾಗಿದೆ. ಪಾಲಕರು ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಮಯ ಮೀಸಲಿಡಬೇಕು. ಸಮಾಜದಲ್ಲಿ ಹಣ, ಅಧಿಕಾರಕ್ಕೆ ಬೆಲೆ ಇಲ್ಲ. ನಿಸ್ವಾರ್ಥವಾಗಿ ಯಾರೂ ಸೇವೆ ಸಲ್ಲಿಸುತ್ತಾರೆ ಅಂತಹವರನ್ನು ಸಮಾಜ ಗುರುತಿಸುತ್ತದೆ ಎಂದರು.
ಸರ್ಕಾರಿ ಕಾಲೇಜಿನ ಅಭಿವೃದ್ಧಿ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಿಸಲು ಕಳೆದ 30 ವರ್ಷಗಳಿಂದಲೂ ನಿರಂತರ ಕೊಡುಗೆ ನೀಡಿ, ಕಳೆದ ಸಾಲಿನಲ್ಲಿ ಸಿಇಟಿ ತರಬೇತಿ ಪ್ರಾರಂಭಿಸಿದ ಪರಿಣಾಮವಾಗಿ ಇದೇ ಕಾಲೇಜಿನ 40 ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗ ಹಾಗೂ ಒಬ್ಬ ವಿದ್ಯಾರ್ಥಿ ವೈದ್ಯಕೀಯ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಬೋಧಕ ವರ್ಗ ಸೇರಿದಂತೆ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ. ಇಂದು ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆ ಮಾಡಲಾಗಿದೆ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಕಳೆದ ಸಾಲಿನಲ್ಲಿ ಉನ್ನತ ಸ್ಥಾನ ಪಡೆದಿರುವ ವಿದ್ಯಾರ್ಥಿಗಳನ್ನು ಮಾದರಿಯಾಗಿಟ್ಟುಕೊಂಡು, ಜೀವನದಲ್ಲಿ ಗುರಿ ಸಾಧಿಸುವಂತೆ ಸಲಹೆ ನೀಡಿದರು.
ಕಳೆದ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ವರ್ಗಾವಣೆಗೊಂಡ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಪುರಸಭಾ ಅಧ್ಯಕ್ಷೆ ಕೆ.ಎನ್.ಬನಶಂಕರಿ ರಘು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿ.ಎನ್.ಪುಟ್ಟಸ್ವಾಮಿಗೌಡ, ರಾಮಚಂದ್ರು, ಜಯರಾಮು, ಪ್ರಾಂಶುಪಾಲ ಎಚ್.ಆರ್. ಬಸವಲಿಂಗಮೂರ್ತಿ, ಪೇಟೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ನೇತ್ರಾವತಿ, ನುಗ್ಗೆಹಳ್ಳಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಟಿ.ಆರ್.ಸ್ವಾಮಿ, ಸರ್ಕಾರಿ ಸ್ವತಂತ್ರ ಪೂರ್ವ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ರಾಮೇಗೌಡ ಇತರರು ಭಾಗವಹಿಸಿದ್ದರು.