

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕಾಯಂ ಕುಲಪತಿ ನೇಮಕಾತಿ ನನೆಗುದಿಗೆ ಬಿದ್ದಿದೆ. 13 ತಿಂಗಳಿಂದ ಕುಲಪತಿ ನೇಮಕವಾಗದೆ ಪ್ರಭಾರ ಆಡಳಿತಾಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿವಿ ಕಾಯಂ ಕುಲಪತಿಯಾಗಿದ್ದ ಪ್ರೊ. ಪ್ರಮೋದ ಗಾಯಿ ಅವರ ಅಧಿಕಾರವಧಿ 2019ರ ಜೂ. 15ರಂದು ಮುಕ್ತಾಯಗೊಂಡಿದೆ. ಅವರಿಗಿಂತ ಮೊದಲು ಡಾ. ಎಸ್.ಎಸ್. ಹೂಗಾರ ಸಹ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರೊ. ಗಾಯಿ ಅವಧಿ ಮುಗಿದ ನಂತರ ಇಬ್ಬರು ಪ್ರಭಾರಿಗಳು ಕಾರ್ಯನಿರ್ವಹಿಸಿದ್ದು, ಇತ್ತೀಚೆಗೆ 3ನೇಯವರು ಅಧಿಕಾರ ವಹಿಸಿಕೊಂಡಿದ್ದಾರೆ.
ಪ್ರೊ. ಗಾಯಿ ಅಧಿಕಾರವಧಿ ಮುಗಿದ ನಂತರ 2019ರ ಜೂ. 15ರಿಂದ 2020ರ ಜ. 31ರವರೆಗೆ ಡಾ. ಎ.ಎಸ್. ಶಿರಾಳಶೆಟ್ಟಿ ಪ್ರಭಾರಿಯಾಗಿ ನೇಮಕಗೊಂಡಿದ್ದರು. ಅವರ ಡೀನ್ಶಿಪ್ ಅವಧಿ ಮುಗಿದ ನಂತರ ಕುಲಪತಿ ಹುದ್ದೆಯನ್ನೂ ಬಿಟ್ಟುಕೊಟ್ಟಿದ್ದರು. 2020ರ ಫೆ. 1ರಿಂದ ಅಧಿಕಾರ ವಹಿಸಿಕೊಂಡ ಪ್ರೊ. ಟಿ.ಎಂ. ಭಾಸ್ಕರ್ ಜೂ. 30ರಂದು ನಿವೃತ್ತಿಯಾದರು. ನಿಯಮಾವಳಿಯಂತೆ ಡೀನ್ಗಳಲ್ಲಿ ಹಿರಿಯರಾದ ಕೌಸಾಳಿ ವ್ಯವಹಾರ ಅಧ್ಯಯನ ವಿಭಾಗದ ಪ್ರೊ. ಶಿವಪ್ಪ ಜು. 1ರಿಂದ ಕವಿವಿ 3ನೇ ಪ್ರಭಾರ ಕುಲಪತಿಯಾಗಿ ನಿಯುಕ್ತಿಗೊಂಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಉನ್ನತ ಶಿಕ್ಷಣ ಇಲಾಖೆ 2019ರಲ್ಲೇ ಪತ್ರಿಕಾ ಜಾಹೀರಾತು ನೀಡಿತ್ತು. ಅರ್ಹ ಪ್ರಾಧ್ಯಾಪಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ಸದಸ್ಯರ ಬದಲಾವಣೆಯಿಂದಾಗಿ ನೇಮಕ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ.
ಸದ್ಯ ಕವಿವಿ ಕುಲಪತಿ ನೇಮಕದ ಶೋಧನಾ ಸಮಿತಿಗೆ ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ ಅಧ್ಯಕ್ಷರಾಗಿದ್ದಾರೆ. ರಾಜ್ಯಪಾಲರಿಂದ ಡಾ. ಪ್ರತಾಪಸಿಂಗ್ ಚೌಹಾಣ್, ವಿವಿ ಧನಸಹಾಯ ಆಯೋಗದಿಂದ ಪ್ರೊ. ವಿ.ಸಿ. ಚೌಹಾಣ್ ಹಾಗೂ ಕವಿವಿ ಸಿಂಡಿಕೇಟ್ನಿಂದ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ನಾಮನಿರ್ದೇಶನಗೊಂಡಿದ್ದಾರೆ.
ಕವಿವಿ ಕುಲಪತಿ ಹುದ್ದೆ ಮೇಲೆ ಹಲವರು ಕಣ್ಣಿಟ್ಟಿದ್ದು, ತೆರೆಮರೆಯ ಕಸರತ್ತು ನಡೆಸುತ್ತಲೇ ಇದ್ದಾರೆ. ಸುಮಾರು 98 ಅರ್ಜಿಗಳು ಸಲ್ಲಿಕೆ ಯಾಗಿರುವುದಾಗಿ ತಿಳಿದುಬಂದಿದೆ.
ಶೋಧನಾ ಸಮಿತಿಯು ಬಂದ ಅರ್ಜಿಗಳನ್ನು ಪರಿಶೀಲಿಸಿ ಮೂವರ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸಚಿವರಿಗೆ ಕಳುಹಿಸುತ್ತದೆ. ಸರ್ಕಾರದಿಂದ ಒಬ್ಬರ ಹೆಸರು ಶಿಫಾರಸುಗೊಂಡು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ರಾಜ್ಯಪಾಲರು ಅಸ್ತು ಎಂದರೆ ಮಾತ್ರ ಕುಲಪತಿ ಆಯ್ಕೆ. ಸರ್ಕಾರ ಕಳುಹಿಸುವ ಹೆಸರು ಬಹುತೇಕ ಅಂತಿಮಗೊಳ್ಳುತ್ತದೆ.
ನೇಮಕಾತಿಗೂ ತಡೆ
2019ರ ಜೂನ್ನಲ್ಲಿ ಪ್ರೊ. ಗಾಯಿ ಅವರಿಂದ ತೆರವಾದ ನಂತರ ನಡೆಯುತ್ತಿರುವ ಕುಲಪತಿ ನೇಮಕ ಹಲವಾರು ಕಾರಣಗಳಿಂದ ಮುಂದೂಡುತ್ತಲೇ ಬಂದಿದೆ. ಪ್ರಭಾರ ಕುಲಪತಿ ಆಡಳಿತಾವಧಿಯಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕರ ನೇಮಕಾತಿಯೂ ನಡೆಯುತ್ತಿಲ್ಲ. ಕವಿವಿಯ ಬಹುತೇಕ ಸ್ನಾತಕೋತ್ತರ ವಿಭಾಗಗಳು ಸೇರಿ ನೂರಾರು ಸಹಾಯಕ ಹಾಗೂ ಸಹ ಪ್ರಾಧ್ಯಾಪಕರ ಹುದ್ದೆಗಳು ಭರ್ತಿಯಾಗಿಲ್ಲ. ವರ್ಷದಿಂದ ವರ್ಷಕ್ಕೆ ನಿವೃತ್ತರ ಸಂಖ್ಯೆಯೂ ಹೆಚ್ಚುತ್ತಿದ್ದು, ಹಲವು ವಿಭಾಗಗಳು ಅತಿಥಿ ಉಪನ್ಯಾಸಕರಿಂದಲೇ ಕಾರ್ಯನಿರ್ವಹಿಸುವಂತಾಗಿದೆ.
EndFragment