ಕವಿವಿ ಕನ್ನಡ ಪಠ್ಯದಲ್ಲಿ ರಾಷ್ಟ್ರೀಯತೆಗೆ ಅವಮಾನ ಆರೋಪ; ಬಿಜೆಪಿ, ಎಬಿವಿಪಿಯಿಂದ ಬೃಹತ್ ಪ್ರತಿಭಟನೆ

24 Dwd 1 New
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿಶ್ವವಿದ್ಯಾಲಯ ಬಿ.ಎ ಪ್ರಥಮ ಸೆಮಿಸ್ಟರ್ ಕನ್ನಡ ಭಾಷೆಯ `ಬೆಳಗು' ಪಠ್ಯಪುಸ್ತಕ ರಚನೆಯ ಜವಾವ್ದಾರಿ ಹೊತ್ತ ಎಲ್ಲರ ಮೇಲೆ ಕಾನೂನು ಕ್ರಮ ಜರಗಿಸಲು ಆಗ್ರಹಿಸಿ ಎಬಿವಿಪಿಯಿಂದ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕುಲಪತಿ ಆಡಳಿತ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ರಾಮಲಿಂಗಪ್ಪ ಟಿ. ಬೇಗೂರ ಅವರ ರಾಷ್ಟ್ರ ವಿರೋಧಿ, ಸಂವಿಧಾನ ವಿರೋಧಿ ಮತ್ತು ಸಮಾಜವನ್ನು ವಿಘಟಿಸುವ ರೀತಿಯಲ್ಲಿ ರೂಪುಗೊಂಡಿಸುವ ಲೇಖನವನ್ನು ಪಠ್ಯದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಭಾರತ ಮಾತೆಯನ್ನು ಪೂಜ್ಯನೀಯ ಸ್ಥಾನದಲ್ಲಿ ಗುರುತಿಸಲಾಗಿದೆ. ಭಾರತ ಮಾತಾ ಕಿ ಜೈ ಎನ್ನುವ ಘೋಷಣೆ ಸ್ವಾತಂತ್ರ‍್ಯ ಹೋರಾಟದ ಸಮಯದಿಂದ ಎಲ್ಲರನ್ನೂ ಒಗ್ಗೂಡಿಸುತ್ತಿದೆ. ಆದರೆ, ಇದನ್ನು ವಿರೋಧಿಸುವ ಲೇಖಕರ ಮನಸ್ಥಿತಿಯು ದೇಶದ ಬಗ್ಗೆ ಹೊಂದಿರುವ ಗೌರವವು ಕಿಂಚಿತ್ತು ಎನ್ನುವುದನ್ನು ತೋರಿಸುತ್ತದೆ.

ಅಲ್ಪಸಂಖ್ಯಾತರನ್ನು 2ನೇ ದರ್ಜೆಗೆ ಹೋಲಿಸಿರುವುದು, ಭಾರತ ಅಣುಬಾಂಬ್ ಹೊಂದಿರುವುದು ಮತ್ತು ಚಂದ್ರಯಾನ ನಡೆಸಿರುವುದನ್ನು ತುಚ್ಛವಾಗಿ ಖಂಡಿರುವುದು ವಿದ್ಯಾರ್ಥಿಗಳಲ್ಲಿ ದೇಶದ ಬಗೆಗಿನ ಗೌರವ ಭಾವನೆಯನ್ನು ಕುಗ್ಗಿಸುತ್ತದೆ. ವಿಶ್ವವಿದ್ಯಾಲಯವು ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಈ ಲೇಖನವನ್ನು ಕೈ ಬಿಡಬೇಕು. ಪಠ್ಯ ಪರಿಷ್ಕರಣೆ ಆದೇಶ ಹೊರಡಿಸಬೇಕು. ಕನ್ನಡ ಅಭ್ಯಾಸ ಮಂಡಳಿಯ ಅಧ್ಯಕ್ಷ ಪ್ರೊ. ಕೃಷ್ಣ ನಾಯಕ ಅವರಿಗೆ ನೀಡಿರುವ ಜವಾಬ್ದಾರಿಯಿಂದ ವಜಾಗೊಳಿಸಬೇಕು. ಸಂಪಾದಕರು ಮತ್ತು ಪಠ್ಯ ರಚನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅವರ ಬಡ್ತಿಗಳನ್ನು ತಡೆ ಹಿಡಿಯಬೇಕು. ಪಠ್ಯ ರಚನೆಯಲ್ಲಿರುವ ಅಧ್ಯಾಪಕರನ್ನು ಅಮಾನತಿನಲ್ಲಿರಿಸಬೇಕು. ತುರ್ತು ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅರುಣ ಅಮರಗೋಳ, ಮಣಿಕಂಠ ಕಳಸ, ಸೋಹನ್ ಮಲ್ಲಾಡದ, ವಿದ್ಯಾನಂದ ಸ್ಥಾವರಮಠ, ಉಲ್ಲಾಸ, ತೃಪ್ತಿ, ಪೂರ್ಣಿಮಾ, ರಾಘವೇಂದ್ರ ದೇಶಪಾಂಡೆ, ವಿಜಯ ಕಲ್ಲೂರ, ಸಚಿನ್, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಬೆಂಬಲ: ಬಿಜೆಪಿ ಮುಖಂಡರು ಎಬಿವಿಪಿ ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆಗೆ ಬೆಂಬಲ ನೀಡಿದರು. ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಜ್ಯೋತಿ ಪಾಟೀಲ, ಮುಖಂಡರಾದ ಸಂಜಯ ಕಪಟಕರ, ಇತರರು ಪಾಲ್ಗೊಂಡಿದ್ದರು. ರಾಷ್ಟ್ರೀಯತೆಗೆ ಅವಮಾನಕರವಾಗಿರುವ ಪಠ್ಯವನ್ನು ತೆಗೆದುಹಾಕದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಶಾಸಕ ಬೆಲ್ಲದ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net