

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ನೀಡುವ 2023ನೇ ಸಾಲಿನ ಸಿರಿಗನ್ನಡಂ ಗೆಲ್ಗೆ ರಾ.ಹ.ದೇಶಪಾಂಡೆ ಪ್ರಶಸ್ತಿ ಹಾಗೂ ಕನ್ನಡ ಪ್ರಪಂಚ ಡಾ. ಪಾಟೀಲ ಪುಟಪ್ಪ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಕನ್ನಡ ಭಾಷೆಯ ಸಂವರ್ಧನೆಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಸಾಹಿತಿ, ಚಿಂತಕರು, ಸಂಸ್ಥೆಗಳಿಗೆ ನೀಡುವ ಸಿರಿಗನ್ನಡಂ ಗೆಲ್ಗೆ ರಾ.ಹ. ದೇಶಪಾಂಡೆ ಪ್ರಶಸ್ತಿಯನ್ನು 2023ನೇ ಸಾಲಿಗೆ ಬೀದರ ಜಿಲ್ಲೆ ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಪತ್ರಿಕಾ ರಂಗ ಮತ್ತು ಕನ್ನಡಪರ ಹೋರಾಟದಲ್ಲಿ ತೊಡಗಿದ ವ್ಯಕ್ತಿ, ಸಂಸ್ಥೆಗಳಿಗೆ ನೀಡುವ ಕನ್ನಡ ಪ್ರಪಂಚ ಡಾ. ಪಾಟೀಲ ಪುಟಪ್ಪ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಬೆಂಗಳೂರಿನ ಡಾ. ಜಿ. ರಾಮಕೃಷ್ಣ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಗಿದೆ. ಎರಡೂ ಪ್ರಶಸ್ತಿಗಳು ತಲಾ 50 ಸಾವಿರ ರೂ. ನಗದು, ಫಲಕ ಒಳಗೊಂಡಿವೆ.
ಸಿರಿಗನ್ನಡಂ ಗೆಲ್ಗೆ ರಾ.ಹ.ದೇಶಪಾಂಡೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ವೆಂಕಟೇಶ ಮಾಚಕನೂರ, ಶ್ರೀನಿವಾಸ ವಾಡಪ್ಪಿ, ಬಳ್ಳಾರಿಯ ಸಿ. ಚನ್ನಬಸವಣ್ಣ ಹಾಗೂ ಸಂಘದ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಡಾ. ಸಂಜೀವ ಕುಲಕರ್ಣಿ, ಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ, ವಿಶ್ವೇಶ್ವರಿ ಹಿರೇಮಠ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸದಸ್ಯರಾಗಿದ್ದರೆ, ಕನ್ನಡ ಪ್ರಪಂಚ ಡಾ ಪಾಟೀಲ ಪುಟಪ್ಪ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಪ್ರೇಮಕುಮಾರ ಹರಿಯಬ್ಬೆ, ಡಾ. ಓಂಕಾರ ಕಾಕಡೆ, ಚಂದ್ರಕಾಂತ ಬೆಲ್ಲದ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ. ಗುರು ಹಿರೇಮಠ, ಡಾ. ಜಿನದತ್ತ ಹಡಗಲಿ, ಶಂಕರ ಹಲಗತ್ತಿ ಸದಸ್ಯರಾಗಿದ್ದಾರೆ.
ಸಂಘದ 134ನೇ ಸಂಸ್ಥಾಪನಾ ದಿನ ನಿಮಿತ್ತ ಏರ್ಪಡಿಸುವ ಸಮಾರಂಭದಲ್ಲಿ ಸಿರಿಗನ್ನಡಂ ಗೆಲ್ಗೆ ರಾ.ಹ. ದೇಶಪಾಂಡೆ ಪ್ರಶಸ್ತಿಯನ್ನು ಜು. 22ರಂದು ಹಾಗೂ ಕನ್ನಡ ಪ್ರಪಂಚ ಡಾ. ಪಾಟೀಲ ಪುಟಪ್ಪ ಪ್ರಶಸ್ತಿಯನ್ನು ಜು. 24ರಂದು ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.