ಕವಿಯಾದವನು ಮೊದಲು ಮಾಗಬೇಕು

10
Published on

ಮೈಸೂರು: ಕವಿ ಕಾಡ್ನೂರು ಶಿವೇಗೌಡ (ಕಾಶಿಗೌ) ಅವರ ಆರದ ಅರುವತ್ತು, ಮನದಾಳದ ನಾದ, ಒಡಲ ಮಾತು ಎಂಬ ಮೂರು ಕವನ ಸಂಕಲಗಳನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು.


ಶಿವರಾಂಪೇಟೆಯ ಶ್ರೀ ರಾಜೇಂದ್ರ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್ ವತಿಯಿಂದ ದೇವರಾಜ ಮೊಹಲ್ಲಾದ ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.


ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಯಾವುದೇ ರೀತಿಯ ಕಾವ್ಯಕ್ಕೂ ಒಂದು ಹದವಿದ್ದು, ಕವಿಯಾದವನು ಕವಿತೆ ಕಟ್ಟುವ ಮೊದಲು ತಾನೂ ಹದಗೊಂಡು ಮಾಗಬೇಕು. ಆಗ ಹೇಗೆ ಬೇಕಾದರೂ ಬರೆಯಬಲ್ಲ ಛಾತಿ, ಪದಗಳನ್ನು ಬೆಂಡೆತ್ತುವ ಕಲೆ ಕರಗತವಾಗುತ್ತದೆ. ಇದನ್ನು ಶಿವೇಗೌಡರು ಸಿದ್ಧಿಸಿಕೊಂಡಿದ್ದಾರೆ ಎಂದರು.


ಈ ಮೂರೂ ಕೃತಿಗಳು ಶಿವೇಗೌಡರ ಅನುಭವ, ಅನುಭಾವದ ದೇಸಿ ಕಾವ್ಯಕ್ಕೆ ಸಾಕ್ಷಿಗಲ್ಲು. ಜನೋಪಯೋಗಿ ಕವಿತೆ ರಚಿಸಿದ್ದು, ಕನ್ನಡ ಕಾವ್ಯಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೂರ್ನಾಲ್ಕು ದಶಕಗಳಿಂದಲೂ ಅವರೊಳಗೆ ಸುಪ್ತವಾಗಿ ಅಡಗಿದ್ದ ಕವಿತೆಗಳೆಲ್ಲವನ್ನೂ ಈಗ ಮುಕ್ತವಾಗಿ ಒಮ್ಮೆಗೇ ಹೊರ ಹಾಕಿದ್ದಾರೆ. ಕೆಲವೇ ತಿಂಗಳಲ್ಲಿ 10 ಕೃತಿಗಳನ್ನು ಪ್ರಕಟಿಸಿ ಕಾಶಿಗೌ ಅವರು ಸಾಧನೆ ಮೆರೆದಿದ್ದಾರೆ ಎಂದರು.


ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗಮಲ್ಲೇಶ್ ಮಾತನಾಡಿದರು. ನಿವೃತ್ತಿ ಹೊಂದಿದ ಕಾಲೇಜಿನ ಪ್ರಾಂಶುಪಾಲ ಕಾಡ್ನೂರು ಶಿವೇಗೌಡ, ಹಿರಿಯ ಉಪನ್ಯಾಸಕಿ ಸುಶೀಲ ವಿ.ಭಟ್ ಕುರ್ಸೆ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.


ಪಾಲಿಕೆ ಸದಸ್ಯರೂ ಆದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಎಂ.ಪ್ರಮೀಳಾ ಭರತ್, ಹಿರಿಯ ಸದಸ್ಯರಾದ ವಿಘ್ನೇಶ್ವರ ವಿ.ಭಟ್, ಫೋಟೋ ರಾಜಗೋಪಾಲ್, ಪ್ರಕಾಶಕ ಡಿ.ಎನ್. ಲೋಕಪ್ಪ , ಉಪನ್ಯಾಸಕರಾದ ಕೋಟೆ ವೆಂಕಟೇಶ್, ಡಾ.ಎಚ್.ಎಂ. ಸ್ವಾಮಿಗೌಡ, ಡಾ.ಎಂ.ಬಾಲರಾಜು, ಡಾ.ನಾಗಮ್ಮ, ಡಾ.ರಮಾನಂದ್, ಸುದೀಪ್, ಶಿವಕುಮಾರ್, ಆನಂದ್, ಕೃಷ್ಣ, ಕೋಟೆ ವೆಂಕಟೇಶ್, ಎಂ.ವಿ. ಸುನೀತಾ, ಉಷಾ ಎಸ್. ಗೋಂದಳಿ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net