ಕವಿಯ ಸ್ವಾತಂತ್ರೃಕ್ಕೆ ಅಂಕುಶ ಹಾಕುವುದು ಸರಿಯಲ್ಲ

9
Published on

ಮೈಸೂರು: ಹಾವೇರಿಯಲ್ಲಿ ಜ.6ರಿಂದ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವಿತೆಗಳನ್ನು ಹಾಡಲು ಅವಕಾಶ ನೀಡದಿರುವುದು ಆರೋಗ್ಯಕರ ಸಮಾಜದ ಲಕ್ಷಣ ಅಲ್ಲ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಬೇಸರಿಸಿದರು.

ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಕುವೆಂಪು ಸಾಹಿತ್ಯ-ಬಹುಮುಖಿ ಚಿಂತನೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕವಿ ತನ್ನ ಕವಿತೆಯನ್ನು ವಾಚನ ಮಾಡಬೇಕೇ ಹೊರತು, ಹಾಡಬಾರದು ಎಂಬ ನಿರ್ಬಂಧನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಹೇರಿದೆ. ಹೀಗೆ ಕವಿಯ ಸ್ವಾತಂತ್ರೃಕ್ಕೆ ಅಂಕುಶ ಹಾಕುವುದು ಸರಿಯಲ್ಲ ಎಂದು ಕಿಡಿ ಕಾರಿದರು.

ಕಸಾಪ ನಡೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಮುಸ್ಲಿಂ ಸಾಹಿತಿಗಳಿಗೆ ಅವಕಾಶ ನೀಡಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಕುವೆಂಪು ಅವರು ಇದ್ದಿದ್ದರೆ ಈಗಿನ ಪರಿಸ್ಥಿತಿ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಅವರು ಯಾವತ್ತು ಶ್ರೀಸಾಮಾನ್ಯರ ಪರವೇ ನಿಲ್ಲುತ್ತಿದ್ದರು. ಪ್ರಭುತ್ವ ಪರ ನಿಲ್ಲುತ್ತಿರಲಿಲ್ಲ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಪ್ರಭುತ್ವ ಚಿಂತನೆಯ ಮುಖವಾಣಿ ಆಗಬಾರದು. ಅದು ಕನ್ನಡಿಗರ ಮುಖವಾಣಿ ಆಗಬೇಕು ಎಂದು ಕುಟುಕಿದರು.

ಕುವೆಂಪು ಯುಗದ ಕವಿಯಷ್ಟೇ ಅಲ್ಲ. ಹೊಸಗನ್ನಡ ಸಾಹಿತ್ಯಲೋಕದ ಯುಗ ಪುರುಷ. ಸಮಾನತೆ ಹರಿಹಾರ, ಮನುಜ ಮತ-ವಿಶ್ವಪಥದ ಸಾರಥಿಯೂ ಹೌದು. ಇವರನ್ನು ಮನುಷ್ಯತ್ವ ರೂಪದಲ್ಲಿ ಅರ್ಥೈಸಿಕೊಳ್ಳಬೇಕು.ಅವರಂತೆ ಸ್ವ-ವಿಮರ್ಶೆ ಮಾಡಿಕೊಂಡ ಮತ್ತೊಬ್ಬ ಸಾಹಿತಿ ಸಿಗುವುದಿಲ್ಲ ಎಂದರು.

ಸ್ವಾತಂತ್ರೃ ಪೂರ್ವದಲ್ಲಿ ಶ್ರೀಸಾಮಾನ್ಯರು ಮತ್ತು ದಲಿತರ ಪರ ಪ್ರಖರ ಸಾಹಿತ್ಯವನ್ನು ಅನೇಕರು ಸೃಷ್ಟಿಸಿದ್ದರು. ಬಳಿಕ ಇವರೆಲ್ಲ ಜನಾಂಗೀಯ ವ್ಯಾಮೋಹಕ್ಕೆ ಒಳಗಾಗಿ ಈ ಪ್ರಖರತೆ ಕಡಿಮೆ ಆಯಿತು. ಅರೆ ಉದಾರವಾದಿಗಳು ಸೌಮ್ಯ ಬರಹಗಾರರಾಗಿ ಪರಿವರ್ತನೆಯಾದರು. ಆದರೆ, ಸ್ವಾತಂತ್ರೃದ ಬಳಿಕ ಕುವೆಂಪು ಮಾತ್ರ ಪ್ರಖರ ಬರಹಗಾರರಾಗುವ ಮೂಲಕ ಶ್ರೀಸಾಮಾನ್ಯರ ಪರ ವಹಿಸಿದ್ದರು. ಹೀಗಾಗಿ, ಕನ್ನಡ ಸಾಹಿತ್ಯಲೋಕದಲ್ಲಿ ಅವರೊಬ್ಬರು ಒಂಟಿ ಸಲಗ. ಜಲಗಾರ, ಶೂದ್ರತಪಸ್ವಿ ನಾಟಕದ ಮೂಲಕ ವಿಚಾರ ಕ್ರಾಂತಿ ಹುಟ್ಟು ಹಾಕಿದರು ಎಂದು ವಿಶ್ಲೇಷಿಸಿದರು.

ಮೈವಿವಿ ಹಂಗಾಮಿ ಕುಲಪತಿ ಡಾ.ಎಂ.ರಾಜಶೇಖರ್, ಸಾಹಿತಿ ಡಾ.ಡಿ.ಕೆ.ರಾಜೇಂದ್ರ, ಸಂಸ್ಥೆಯ ನಿರ್ದೇಶಕಿ ಡಾ.ವಿಜಯಕುಮಾರಿ ಎಸ್.ಕರಿಕಲ್ ಇದ್ದರು.

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಪ್ರಪಂಚದ ಶ್ರೇಷ್ಠ ಕೃತಿಯಲ್ಲಿ ಒಂದು. ಇದು ವಾಸ್ತವ ರೂಪದಲ್ಲಿರುವ ಮಹಾಕಾವ್ಯ. ಕನ್ನಡ ಸಾಹಿತ್ಯವನ್ನು ಉತ್ತುಂಗ ಶಿಖರಕ್ಕೇರಿಸಿದ ಕಾದಂಬರಿ ಎಂದು ಬಣ್ಣಿಸಿದರು.
ಕುವೆಂಪು ಸಾಹಿತ್ಯ ಸರ್ವಕಾಲಿಕ. ಎಲ್ಲ ಕಾಲದಲ್ಲೂ ಒರೆಗಲ್ಲಿಗೆ ಹಚ್ಚಿ ನೋಡಬಹುದು. ಇದರಲ್ಲಿ ಸರ್ವಕಾಲಿಕ ಮೌಲ್ಯ ಕೊಡುವ ಶಕ್ತಿ ಇದೆ. ಹೀಗಾಗಿ, ಕುವೆಂಪು ಚಿಂತನೆಯನ್ನು ಬರೀ ಮಾತಿನ ಸಂತೃಪ್ತಿಗೆ ಬಳಕೆ ಮಾಡಿಕೊಳ್ಳದೆ, ಬದುಕಿನ ಚಲನಶೀಲತೆಗೆ ಅಡಿಪಾಯವಾಗಿಸಿಕೊಳ್ಳಬೇಕು.

ಪ್ರೊ.ಅರವಿಂದ ಮಾಲಗತ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net