ಕವಿತೆ ಎಂದರೆ ಸಮಕಾಲೀನ ಸಮಸ್ಯೆಗಳನ್ನು ಕಾವ್ಯಗಳಲ್ಲಿ ಪ್ರತಿಪಾದಿಸಬೇಕು

ಕವಿತೆ ಎಂದರೆ ಸಮಕಾಲೀನ ಸಮಸ್ಯೆಗಳನ್ನು ಕಾವ್ಯಗಳಲ್ಲಿ ಪ್ರತಿಪಾದಿಸಬೇಕು
Published on

ಹಾಸನ: ಕವಿತೆ ಎಂದರೆ ತಿರಸ್ಕಾರ, ಅಪನಂಬಿಕೆ ಹಾಗು ವ್ಯಂಗ್ಯಗಳನ್ನೇ ಹೊಂದಿರಬಾರದು. ನಂಬಿಕೆ, ಪ್ರೀತಿ, ಕರುಣೆ ಮೂಲಕ ಸಮಕಾಲೀನ ಸಮಸ್ಯೆಗಳನ್ನು ಕಾವ್ಯಗಳಲ್ಲಿ ಪ್ರತಿಪಾದಿಸಬೇಕು ಹಾಗು ಅದು ಎಲ್ಲರನ್ನೂ ಒಳಗೊಳ್ಳುವಂತಿರಬೇಕೆಂದು ಕವಯತ್ರಿ ಲಾವಣ್ಯ ಪ್ರಭು ಅವರು ಹೇಳಿದರು.
ನಗರದ ಗಣಪತಿ ಪೆಂಡಾಲ್‌ನಲ್ಲಿ ಅಭಿನಂದನಾ ಸಾಹಿತ್ಯ ಬಳಗದಿಂದ ಬುಧವಾರ ಏರ್ಪಡಿಸಿದ್ದ ದಸರಾ ಕವಿಗೋಷ್ಟಿ ಉದ್ಘಾಟಿಸಿ ಮಾತನಾಡಿದ ಅವರು, ಕವಿಗಳೆಲ್ಲ ಹುಚ್ಚರು, ಭ್ರಮೆ ಹುಟ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ. ಕವಿಗಳನ್ನು ನಾಡಿನಿಂದ ಹೊರಹಾಕಬೇಕೆಂದು ಸಾಕ್ರೆಟಿಸ್ ಹೇಳುತ್ತಾನೆ. ಆದರೆ ಕವಿಗಳು ಇಲ್ಲದಿದ್ದರೆ ಪ್ರಪಂಚ ಹೇಗಿರುತ್ತೆಂಬ ಕಲ್ಪನೆಯೂ ಅಸಾಧ್ಯ ಎಂದರು.
ಕಾವ್ಯ, ಹಾಡು, ಸಂಗೀತ ಇಲ್ಲದಿದ್ದರೆ ಮನುಷ್ಯ ಜೀವನ ಇಷ್ಟು ಚೆನ್ನಾಗಿರುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತಸದ ವಿಚಾರವೆ ಎಂದರು.
ಬರೆದಿದ್ದೆಲ್ಲವೂ ಕವಿತೆ ಆಗಬೇಕೆಂಬ ನಿಯಮವಿಲ್ಲ ಹಾಗು ಕವಿತೆ ರಚನೆಗೆ ನಿರ್ದಿಷ್ಟ ನಿಯಮಗಳೂ ಇಲ್ಲ. ದ.ರಾ.ಬೇಂದ್ರೆ ಅವರು ಕವಿತೆ ಓದುವ, ಅರ್ಥೈಸಿಕೊಳ್ಳುವ ವಿಧಾನದ ಕುರಿತು ಪಾಠ ಮಾಡುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಅಂತಹ ಹಿರಿಯ ಕವಿಗಳಿಲ್ಲದೆ ಇರುವುದು ಸಾಹಿತ್ಯ ಲೋಕಕ್ಕೆ ಭಾರೀ ನಷ್ಟವುಂಟು ಮಾಡುತ್ತಿದೆ. ಕವಿತೆ ಎಂದರೆ ಕೇವಲ ನಕಾರಾತಕ ಅಂಶಗಳನ್ನೆ? ಒಳಗೊಂಡಿರಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಅಪನಂಬಿಕೆ, ವ್ಯಂಗ್ಯ, ತಿರಸ್ಕಾರವನ್ನೇ ಆದ್ಯತೆಯಾಗಿ ಮಾಡಿಕೊಂಡರೆ ಕವಿ ಸಾಧನೆ ಮಾಡಲು ಆಗುವುದಿಲ್ಲ. ಸಕಾರಾತಕ ಚಿಂತನೆಗಳ ಮೂಲಕವೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕೆಂದರು.
ಸಾಹಿತಿ ಎನ್.ಶೈಲಜಾ ಹಾಸನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಭಾರತಿ ಹಾದಿಗೆ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ರಾಜೇಶ್ವರಿ ಹುಲ್ಲೇನಹಳ್ಳಿ, ಭಾರತ ಸೇವಾದಳ ವಲಯ ಸಂಘಟಕಿ ವಿ.ಎಸ್.ರಾಣಿ, ಮಿನಾ ಬೆರಾ, ನೀಲಾವತಿ ಹಾಗು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net