

ನಂಜನಗೂಡು: ನಗರದ ವಿದ್ಯಾನಗರದಲ್ಲಿರುವ ಶಂಕರ ಸದನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಖ್ಯಾತ ಅಂಕಣಕಾರ, ಸಾಹಿತಿ ಡಾ.ವಿ.ರಂಗನಾಥ್ ಅವರ ಕೃತಿಗಳ ಸಾಹಿತ್ಯ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್ ಮಾತನಾಡಿ, ಕವಿಗಳಿಗೆ ಮುಪ್ಪಾಗಲಿ, ಸಾವಾಗಲಿ ಬರುವುದಿಲ್ಲ, ಅವರು ತಮ್ಮ ಕೃತಿಗಳ ಮೂಲಕ ಯಾವಾಗಲೂ ಜೀವಂತವಾಗಿರುತ್ತಾರೆ ಎಂದು ಹೇಳಿದರು.
ಉಪನ್ಯಾಸಕ ಕೊತ್ತಲವಾಡಿ ಶಿವಕುಮಾರ್ ಮಾತನಾಡಿ, ಅಂಕಣ ಬರಹಕ್ಕೆ ಚಂಪಾ, ನಾ.ಡಿಸೋಜಾ, ಎಲ್.ಆರ್.ಶೇಷಗಿರಿರಾವ್ ಸೇರಿದಂತೆ ಅನೇಕ ದಿಗ್ಗಜರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾ.ಮಾ.ನಾಯಕ್ ಅವರ ಅಂಕಣ ಬರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ. ಆ ನಿಟ್ಟಿನಲ್ಲಿ ಡಾ.ವಿ.ರಂಗನಾಥ್ ಅವರು ಸಾಗುತ್ತಿದ್ದಾರೆ ಎಂದರು.
ಸಾಹಿತಿ ಹಾಗೂ ಅಂಕಣಕಾರ ಡಾ.ವಿ.ರಂಗನಾಥ್ ಮಾತನಾಡಿ, ನಾಡಹಬ್ಬ ದಸರಾ ವಿಷಯದ ಬಗ್ಗೆ ಪಿಎಚ್.ಡಿ ಮಾಡಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡರು. ಚುನಾವಣಾ ಆಯೋಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಾಗೂ ದಸರಾ ಮೆರವಣಿಗೆ ವಿವರಣೆ ನೀಡುತ್ತಿದ್ದ ನನಗೆ ವರ್ಗಾವಣೆಯಾಗದೆ ಒಂದೇ ಕಡೆ 13 ವರ್ಷ ಕೆಲಸ ಮಾಡಿ ಸೀನಿಯರ್ ಆದೆ. ಮೂರು ವಿಷಯಗಳ ಬಗ್ಗೆ ಪಿಎಚ್.ಡಿ ಮಾಡಿದ ಬಗ್ಗೆ ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿರು.
ಕಾರ್ಯಕ್ರಮದಲ್ಲಿ ಗಾಯಕ ಇಂದಿರೇಶ್, ನಂಜನಗೂಡು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಂಜನಗೂಡು ಸತ್ಯನಾರಾಯಣ, ಸಂಚಾಲಕ ತಗಡೂರು ಗೋಪಿನಾಥ್, ಸತ್ಯಪ್ರಸಾದ್, ಯುನಿಟಿ ಕಾಲೇಜಿನ ಉಪನ್ಯಾಸಕ ರಾಮಮೋಹನ್, ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಶೇಷಾದ್ರಿ ಸುಬ್ರಹ್ಮಣ್ಯ, ಕವಯತ್ರಿ ಶೋಭಾ ನಾಗಶಯನ ಮತ್ತಿತರರು ಹಾಜರಿದ್ದರು.