

ಚಿತ್ರದುರ್ಗ: ತಮ್ಮ ಚಿಂತನೆ, ಕಾವ್ಯ ಹಾಗೂ ಹೋರಾಟಗಳಲ್ಲಿ ಸದಾ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತಾ ಬಂದಿದ್ದ ಕವಿ ಡಾ.ಸಿದ್ದಲಿಂಗಯ್ಯ ಅವರು ಎಲ್ಲ ಬಡವರ ಬಿಡುಗಡೆಯಲ್ಲಿ ದಲಿತರ ಬಿಡುಗಡೆಯೂ ಅಡಗಿರುವುದಾಗಿ ನಂಬಿದ್ದರು ಎಂದು ರಾಜ್ಯ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಸಿದ್ದಲಿಂಗಯ್ಯ ಅವರ ಪುಣ್ಯಸ್ಮರಣೆ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿದ್ದಲಿಂಗಯ್ಯ ಅವರು ರೈತ, ಬಂಡಾಯ, ಕನ್ನಡ, ದಲಿತ ಚಳವಳಿಗಳಲ್ಲಿ ಜೀವನಪೂರ್ತಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ, ‘47ರ ಸ್ವಾತಂತ್ರ್ಯ’ ಕವನ ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಪ್ರತಿ ಸದಸ್ಯನ ಪ್ರಾತಃಸ್ಮರಣೀಯವಾಗಿದೆ ಎಂದರು.
ಡಾಕ್ಟರೇಟ್ ಪಡೆದ ‘ಗ್ರಾಮ ದೇವತೆ’ ಪ್ರಬಂಧ, ಜೀವನ ಚರಿತ್ರೆ ‘ಊರುಕೇರಿ’ ನಾನಾ ಸಾಹಿತ್ಯ ಪ್ರಕಾರಗಳಲ್ಲಿ ಸಿದ್ದಲಿಂಗಯ್ಯ ಅವರು ಸಾಮಾಜಿಕ ನ್ಯಾಯದ ವಿಚಾರಧಾರೆಗಳನ್ನು ಪ್ರತಿಪಾದಿಸಿದ್ದಾರೆ. ಅಂಬೇಡ್ಕರ್ ವಿಚಾರಗಳಿಂದ ಪ್ರೇರೇಪಿತರಾಗಿ ದಲಿತೇತರರಿಗೆ ಅಂಬೇಡ್ಕರ್ ಅವರನ್ನು ಪರಿಚಯಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು ಎಂದು ಸ್ಮರಿಸಿದರು.
ಚಳ್ಳಕೆರೆ ಬಿಎಸ್‌ಐ ಅಧ್ಯಕ್ಷ ನನ್ನಿವಾಳ ರವಿ, ಉಪನ್ಯಾಸಕಿ ವಿಜಯಲಕ್ಷ್ಮಿ, ಶಿಕ್ಷಕಿಯರಾದ ಪವಿತ್ರಾ, ಅಮೂಲ್ಯಾ, ಶಕುಂತಲಾ, ಶಾಂತಮ್ಮ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನಿಕೋಡ್ ರಮೇಶ್ ಮತ್ತಿತರರು ಇದ್ದರು.