

ಹಾಸನ: ಕವಿಗಳು, ಸಾಹಿತಿಗಳಿರುವ ದೇಶದಲ್ಲಿ ಯುದ್ಧಗಳೇ ಆಗಬಾರದು ಎಂದು ಲೇಖಕ ದೀಕ್ಷಿತ್ ನಾಯರ್ ಅಭಿಪ್ರಾಯಪಟ್ಟರು.
ನಗರದ ರಿಂಗ್ ರಸ್ತೆಯಲ್ಲಿರುವ ಅಕ್ಷರ ಅಕಾಡೆಮಿಯಲ್ಲಿ ನಡೆದ ಬುಕ್ ಮಾತು ಎಂಟನೇ ಸರಣಿ ಕಾರ್ಯಕ್ರಮದಲ್ಲಿ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ’ ಎಂಬ ಪುಸ್ತಕದ ಕುರಿತು ಮಾತನಾಡಿದ ಅವರು, ಕವಿ ಹಾಗೂ ಲೇಖಕರ ಸಾಮಾಜಿಕ ಜವಾಬ್ದಾರಿ ಎಷ್ಟಿದೆ ಎಂಬುದನ್ನು ಈ ಕೃತಿ ಎತ್ತಿ ಹಿಡಿಯುತ್ತದೆ. ಕನ್ನಡದ ಕಣ್ಣುಗಳಾದ ಕುವೆಂಪು ಮತ್ತು ದ.ರಾ. ಬೇಂದ್ರೆ ಮೊದಲಾದ ಮಹಾಕವಿಗಳು ಇಂತಹ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ಸಾಹಿತ್ಯವನ್ನು ನಿರ್ಮಿಸುತ್ತಾ ಬಂದಿರುವುದರಿಂದಲೇ ಇಂದಿಗೂ ನಮ್ಮ ಹುನ್ಮನಗಳಲ್ಲಿ ಉಳಿದಿದ್ದಾರೆ ಎಂದರು.
ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ ಪುಸ್ತಕವೂ ಯಾವುದೇ ಪ್ರಚಾರವಿಲ್ಲದೆ ಸಮಾಜದಿಂದ ಗುರುತಿಸಿಕೊಳ್ಳದೆಯೂ ಸಮಾಜ ಸೇವೆಯನ್ನು ಮಾಡುತ್ತಿರುವ ಅಪರೂಪದ ವ್ಯಕ್ತಿಗಳ ಸಾಧನೆಯ ಕಥೆಯಾಗಿದೆ. ಇದು ಅಂಕಣಗಳ ಸಂಗ್ರಹವಾಗಿದ್ದು, ದೇವರಿಗೆ ಸಲ್ಲುವ ಮಸಣದ ಹೂ ಗಟ್ಟಿಗಿತ್ತಿ ನೀಲಮ್ಮ, ಅವರು ಧನ್ಯ, ನಾವು ಮಾನ್ಯ, ಕಣ್ಣಿಲ್ಲ ಕನಸುಗಳಿವೆ ಕಣ್ಮಣಿ ಅಫ್ಜಲ್ ಮೊಹಮ್ಮದ್, ಕನ್ನಡ ಕಿಂಕರ ಕೆ. ರಾಜಕುಮಾರ್ ಹೀಗೆ ವಿಶಿಷ್ಟರಲ್ಲಿ ವಿಶಿಷ್ಟರಾಗಿ ನಮ್ಮ ನಡುವೆ ಸದ್ದು - ಸುದ್ದಿ ಇಲ್ಲದೆ ಬದುಕುತ್ತಿರುವ ವ್ಯಕ್ತಿ ಹಾಗೂ ವ್ಯಕ್ತಿತ್ವದ ಅನಾವರಣ ಮಾಡಲಾಗಿದೆ. ಹಾಸನದ ಅಕ್ಷರ ಬುಕ್ ಹೌಸ್ ಜ್ಞಾನ ವನವಾಗಿದ್ದು, ತನ್ನ ಹೆಸರಿನಂತೆ ಜನಮನದಲ್ಲಿ ಅಕ್ಷರ ಪ್ರೀತಿ ಬಿತ್ತುವ ಸಾಮಾಜಿಕ ಹೊಣೆಯನ್ನು ಚಂದವಾಗಿ ನಿರ್ವಹಿಸುತ್ತಿದೆ. ಅಕ್ಷರ ಪ್ರೀತಿಯು ಜಿಲ್ಲೆ ಜಿಲ್ಲೆಗಳನ್ನಷ್ಟೇ ಅಲ್ಲದೇ ದೇಶ ದೇಶಗಳನ್ನೂ ಬೆಸೆಯಬಲ್ಲದು. ಅದು ಅಕ್ಷರ ಪ್ರೀತಿ ಗಿರುವ ತಾಕತ್ತು ಎಂದು ಹೇಳಿದರು.
ಅಕ್ಷರ ಬುಕ್ ಹೌಸ್ ಸಂಸ್ಥಾಪಕ ಟೈಮ್ಸ್ ಗಂಗಾಧರ್ ಹಾಗೂ ಇತರರು ಹಾಜರಿದ್ದರು.