ಕವಿ ಶಾಶ್ವತವಾದ ಸಾಂಸ್ಕೃತಿಕ ಶಾಸಕ

18rajesh8
Published on

ಚಾಮರಾಜನಗರ: ಕವಿ ಶಾಶ್ವತವಾದ ಸಾಂಸ್ಕೃತಿಕ ಶಾಸಕನಿದ್ದಂತೆ, ಆತ ಸಮಾಜಮುಖಿಯಾಗಿ, ಜೀವನ್ಮುಖಿಯಾಗಿ ಆತ್ಮ ವಿಶ್ವಾಸವನ್ನು ಬಿತ್ತಬೇಕು ಎಂದು ನಾಡಿನ ಖ್ಯಾತ ಕವಿ ಡಾ.ಜಯಪ್ಪ ಹೊನ್ನಾಳಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಲೇಖಕರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಕ್ರಾಂತಿ ಹಬ್ಬದ ಆಚರಣೆಯ ಸಂಕೇತವಾದ ಬೇವು-ಬೆಲ್ಲ ನೋವು ಮತ್ತು ನಲಿವನ್ನು ಪ್ರತಿಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ಕವಿಯಾದವನು ಅನುಭವದ ಜತೆಗೆ ಅಪೂರ್ವವಾದ ಜೀವನ ದರ್ಶನವನ್ನು ನೀಡಬೇಕು. ವಿಸ್ಮಯದ ಹೊರಗಣ್ಣು ಇದ್ದರೇ, ಅದು ಕಾವ್ಯವನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ. ಕವಿತೆ ಬರೆಯುವುದು ತುಂಬಾ ಕಷ್ಟದ ಕೆಲಸವಾಗಿದ್ದು, ಪ್ರೌಢ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಿದೆ. ಇತ್ತೀಚೆಗೆ ಕವಿಗಳು ಬೌನ್ಸಾಯ್ ಮರಗಳಾಗುತ್ತಿದ್ದಾರೆ. ಅವರು ಕಾಡಿನ ಮರಗಳಾಗಬೇಕು. ಆಗ ಕವಿ ಹೆಚ್ಚು ಜೀವಂತವಾಗಿರಬಲ್ಲ ಎಂದು ಸಲಹೆ ನೀಡಿದರು.

ಕವಿಯಾದವನು ಕಾವ್ಯದ ಮೂಲಕವೇ ಕಾಲಾತೀತವಾಗಬೇಕು. ಲೋಕದ ಜತೆಗೆ ಕಿವಿಯಾಗಲಾರದವರು ಕವಿಯಾಗಲು ಸಾಧ್ಯವಿಲ್ಲ. ಪ್ರೀತಿಯಿಂದ ಆಲಿಸಿದರೇ ಎಲ್ಲವೂ ಗೆಲ್ಲುತ್ತದೆ ಎಂಬ ಮಾತನ್ನು ಅರಿತುಕೊಳ್ಳಬೇಕು. ಕವಿಯಾದವನು ಸಮಗ್ರ ಬದುಕಿನ ನೋಟವನ್ನು ಕಾಣಬೇಕು. ಮೃಗೀಯತೆಯಿಂದ ಮಾನವೀಯತೆಯಡೆಗೆ ಕರೆದುಕೊಂಡು ಹೋಗಬೇಕು. ಜಾತಿಯ ಬದಲು ಜ್ಯೋತಿಯ ಕವಿಗಳಾಗಬೇಕು. ಜಾತ್ಯತೀತ, ಧರ್ಮಾತೀತವಾಗದೇ ಕವಿಯಾಗಲೂ ಸಾಧ್ಯವಿಲ್ಲ. ಬಹುಮುಖ್ಯವಾಗಿ ಶಬ್ಧಕೋಶಕ್ಕಿಂತಲೂ ಕವಿಯಾದವರಿಗೆ ಭಾವಕೋಶದ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಕೇಶವನ್ ಪ್ರಸಾದ್, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡುಮಾದಯ್ಯ, ಪ್ರಧಾನ ಕಾರ್ಯದರ್ಶಿ ಬಿಸಲವಾಡಿ ಸೋಮಶೇಖರ್ ಹಾಗೂ ಇತರರು ಹಾಜರಿದ್ದರು.

ಹಲವು ಕವಿಗಳಿಂದ ಕವಿತೆ ವಾಚನ:

ಜೀವನಾನುಭವ, ಜೀವಧಾತುವಿನ ಪಾರಮ್ಯ, ನೋವು-ನಲಿವುಗಳ ಬದುಕು, ಮಂಗಳಮುಖಿಯರ ಯಾತನೆ, ಸಮಾಜದ ಮೇಲು-ಕೀಳಿನ ವೈರುಧ್ಯ, ಜಿಲ್ಲೆಯ ಪರಿಸರದ ಚಿತ್ರನೋಟವನ್ನು ಹಲವಾರು ಕವಿಗಳು ತಮ್ಮ ಕವಿತೆಯ ಮೂಲಕ ಕಟ್ಟಿಕೊಟ್ಟರು. ಹಿರಿಯ ಕವಿ ಬಾಳಗುಣಸೆ ಮಂಜುನಾಥ್, ಎಂ.ಶಿವಕುಮಾರ್, ಮದ್ದೂರು ದೊರೆಸ್ವಾಮಿ, ಆಸಿಮ, ಕಿರಣ್ ಗಿರ್ಗಿ, ಡಾ.ಶಿವಕುಮಾರ ನಂಜಾಮೇಸಿ, ಮಂಜುಳ, ಡಾ.ಪ್ರೇಮ, ಡಾ.ನಿಂಗಪ್ಪ ಮಂಟೇದರ್, ಕುಸುಮ, ಕೋಮಲ ಸುರೇಶ್, ಭಾಗ್ಯ, ರವಿಚಂದ್ರಪ್ರಸಾದ್, ಪ್ರಸಾದ್ ಅರಳೀಪುರ, ಸಿದ್ದು ಜನ್ನೂರು ಕವಿತೆಗಳು ಗಮನಸೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net