ಕವಾಡಿಗರಹಟ್ಟಿಯ ಅರ್ಹರಿಗೆ ನಿವೇಶನ ನೀಡಿ

Kavadigarahatti
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಚಿತ್ರದುರ್ಗ: ರಸ್ತೆ ವಿಸ್ತರಣೆ ಸಂಬಂಧ ಮನೆ ಕಳೆದುಕೊಂಡ ಅರ್ಹರೆಲ್ಲರಿಗೂ ನಿವೇಶನ ಸೌಲಭ್ಯ ಒದಗಿಸುವ ಕೆಲಸ ನಗರಸಭೆಯಿಂದ ಆಗಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸೂಚಿಸಿದರು.

ವರ್ಷದ ಹಿಂದೆ ಕಲುಷಿತ ನೀರು ಸೇವಿಸಿ, ಅಹಿತಕರ ಘಟನೆ ಸಂಭವಿಸಿದ್ದ ಹೊರವಲಯದ ಕವಾಡಿಗರಹಟ್ಟಿಗೆ ಬುಧವಾರ ಭೇಟಿ ನೀಡಿ, ನಿವಾಸಿಗಳ ಸಮಸ್ಯೆ ಆಲಿಸಿ, ಮಾತನಾಡಿದರು.

ಕವಾಡಿಗರಹಟ್ಟಿ ಬಡಾವಣೆಯ ಒಟ್ಟು ಜನಸಂಖ್ಯೆ ಎಷ್ಟು. ಕುಟುಂಬಗಳ ಸಂಖ್ಯೆ, ಕೂಡು ಕುಟುಂಬಗಳಲ್ಲಿರುವ ನಿವಾಸಿಗಳ ಸಂಖ್ಯೆ ಗುರುತಿಸಿ. ನಂತರ ಒಂದೇ ಕುಟುಂಬದಲ್ಲಿ ನಾಲ್ಕೈದು ಮಂದಿ ಅಣ್ಣತಮ್ಮಂದಿರಿದ್ದು, ಬೇರೆಯಾಗಲು ಇಚ್ಛಿಸಿದಲ್ಲಿ ಅವರಿಗೂ ಕಾನೂನು ಪ್ರಕಾರ ಪ್ರತ್ಯೇಕವಾಗಿ ನಿವೇಶನ ನೀಡಬೇಕು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾಗೆ ತಾಕೀತು ಮಾಡಿದರು.

ನಿವೇಶನ ಹಂಚಿಕೆ ಸಂಬಂಧ ಈಗಾಗಲೇ ಮೂರು ಎಕರೆ ಜಮೀನು ಮಂಜೂರು ಆಗಿದ್ದು, ಇದರಲ್ಲಿ 62 ಫಲಾನುಭವಿಗಳಿಗೆ ನೀಡಲಾಗಿದೆ. ಅದರಲ್ಲೂ ರಸ್ತೆ ವಿಸ್ತರಣೆಗಾಗಿ ವಸತಿ ಸೌಲಭ್ಯ ಕಳೆದುಕೊಂಡವರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಇನ್ನುಳಿದ ಜನರಿಗಾಗಿ ಸುತ್ತಮುತ್ತಲಿನ ಸರ್ಕಾರಿ ಜಮೀನು ಗುರುತಿಸಿ, ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡುವಂತೆ ಸೂಚಿಸಿದರು.

ಕವಾಡಿಗರಹಟ್ಟಿ ಸೇರಿ ನಗರ ವ್ಯಾಪ್ತಿಯ ಎಲ್ಲ ಓವರ್ ಹೆಡ್ ಟ್ಯಾಂಕ್‌ಗಳನ್ನು ಕನಿಷ್ಟ 6 ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸುವ ಮೂಲಕ ಜನರಿಗೆ ಗುಣಮಟ್ಟದ ಕುಡಿಯುವ ನೀರು ಪೂರೈಸಬೇಕು. ಚರಂಡಿಗಳನ್ನು ಆಗಿಂದಾಗ್ಗೆ ಶುಚಿಗೊಳಿಸಬೇಕೆಂದು ಸಲಹೆ ನೀಡಿದರು.

ಸ್ವಯಂಪ್ರೇರಿತ ಪ್ರಕರಣ ದಾಖಲು: ಕವಾಡಿಗರಹಟ್ಟಿ ನಿವಾಸಿಗಳ ಸಂಚಾರಕ್ಕೆ ರಸ್ತೆ, ಮನೆಗಳಿಗೆ ಶೌಚಗೃಹ, ನಿವೇಶನ, ಸೂರು ವಿತರಣೆಯಲ್ಲಿ ಲೋಪ ಉಂಟಾದಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಫಣೀಂದ್ರ ಎಚ್ಚರಿಸಿದರು. ಇಂತಹ ಪ್ರಕರಣಗಳಲ್ಲಿ ನಗರಸಭೆ ಪೌರಾಯುಕ್ತರು, ಜಿಲ್ಲಾಧಿಕಾರಿಯನ್ನೇ ಪಾರ್ಟಿಗಳನ್ನಾಗಿ ಮಾಡಲಾಗುವುದು. ಇದಕ್ಕೆ ಆಸ್ಪದ ನೀಡಬೇಡಿ. ಆಗಿಂದಾಗ್ಗೆ ಇಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ವರದಿ ನೀಡಿ. ಈ ಭಾಗದ ಜನರಿಗೆ ಸಂಪೂರ್ಣ ಸೌಲಭ್ಯ ಕಲ್ಪಿಸಿಕೊಡುವವರೆಗೂ ಪ್ರಕರಣ ಚಾಲ್ತಿಯಲ್ಲಿ ಇರಲಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕಿಲ್ಲ: ಮೂಲಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಓವರ್ ಹೆಡ್ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ, ಪ್ರತಿ ಮನೆಗೂ ಹೊಸದಾಗಿ ನಳ ಸಂಪರ್ಕ ಕಲ್ಪಿಸಲಾಗಿದೆ. ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿದ್ದು, ಸದ್ಯಕ್ಕೆ ಸಮಸ್ಯೆ ಇಲ್ಲ ಎಂದು ಕವಾಡಿಗರಹಟ್ಟಿ ನಿವಾಸಿಗಳು ಉಪಲೋಕಾಯುಕ್ತರಿಗೆ ಮಾಹಿತಿ ನೀಡಿದರು.

ಡಿಸಿ ವೆಂಕಟೇಶ್, ಸಿಇಒ ಸೋಮಶೇಖರ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಲೋಕಾಯುಕ್ತ ಎಸ್‌ಪಿ ವಾಸುದೇವ ರಾಮ್, ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಡಿವೈಎಸ್‌ಪಿ ದಿನಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net