ಕೋವಿಡ್ ವಾರ್ ರೂಂ, ಸಹಾಯವಾಣಿ ಆರಂಭ

omicron
Published on

ಧಾರವಾಡ: ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸಿ, ಜಿಲ್ಲೆಯಲ್ಲಿನ ಸೋಂಕಿತರಿಗೆ ಅಗತ್ಯ ಮಾಹಿತಿ ನೀಡಿ ಸಕಾಲಕ್ಕೆ ಆರೋಗ್ಯ ಚಿಕಿತ್ಸೆ, ನೆರವು ನೀಡಲು ಜಿಲ್ಲಾಡಳಿತವು ಕೋವಿಡ್ ವಾರ್ ರೂಂ ಮತ್ತು ಸಹಾಯವಾಣಿಗಳನ್ನು ಆರಂಭಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಪ್ರಕಟಣೆ ನೀಡಿರುವ ಅವರು, ಕೋವಿಡ್ ದೃಢಪಟ್ಟ ಸೋಂಕಿತರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಲು ಬಯಸಿದರೆ ಕೋವಿಡ್ ವಾರ್​ರೂಂ ಸಿಬ್ಬಂದಿ ಅಗತ್ಯ ಮಾಹಿತಿ ನೀಡಿ ನೆರವಾಗುತ್ತಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್​ನಲ್ಲಿ ಆರಂಭಿಸಿರುವ ಸಹಾಯವಾಣಿಗೆ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು 3 ಪಾಳಿಗಳಲ್ಲಿ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಕಿಮ್್ಸ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಕೋವಿಡ್ ಸಂಬಂಧಿತ ತೊಂದರೆ, ಆರೋಗ್ಯ ಸಲಹೆಗಳ ಅಗತ್ಯವಿದ್ದರೆ ಜಿಲ್ಲಾಡಳಿತದ ಸಹಾಯವಾಣಿಗಳ ಸದುಪಯೋಗ ಪಡೆದುಕೊಳ್ಳಬಹುದು. ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ 1077, ಆರೋಗ್ಯ ಸಹಾಯವಾಣಿ 104 ಮತ್ತು ಹುಬ್ಬಳ್ಳಿ ದೇಶಪಾಂಡೆ ಫೌಂಡೇಷನ್​ನಲ್ಲಿ ಆರಂಭಿಸಿರುವ ಸಹಾಯವಾಣಿ ಮೊ: 8047168111ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

784 ಪ್ರಕರಣ ದಾಖಲು: ಜಿಲ್ಲೆಯಲ್ಲಿ ಸೋಮವಾರ 784 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 110 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್​ನಿಂದ ಓರ್ವ ಮೃತಪಟ್ಟಿದ್ದು, ಈವರೆಗೆ ಮೃತರ ಸಂಖ್ಯೆ 1,326ಕ್ಕೆ ಏರಿಕೆಯಾಗಿದೆ.

ಭತ್ಯೆ, ಪ್ರೋತ್ಸಾಹ ಧನಕ್ಕೆ ಆಗ್ರಹ: ವೈದ್ಯಕೀಯ ಶಿಕ್ಷಣ ಇಲಾಖೆಯ ಕಾಯಂ ಶುಶ್ರೂಷಾಧಿಕಾರಿಗಳಿಗೆ ಕೋವಿಡ್ ಭತ್ಯೆ, ಪ್ರೋತ್ಸಾಹ ಧನ ನೀಡಲು ಆಗ್ರಹಿಸಿ, ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಯಂ ಶುಶ್ರೂಷಾಧಿಕಾರಿಗಳ ಸಂಘದ ಪದಾಧಿಕಾರಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯಾದ್ಯಂತ ಈ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹಾಗಾಗಿ 7 ದಿನಗಳ ಕಾಲ ಪ್ರತಿಭಟನೆ ಮುಂದುವರಿಸಿ, ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲಾಗುವುದು. ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ. ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘದ ಅಧ್ಯಕ್ಷ ನಾಗರಾಜ ನಾಯ್ಕ, ಈರಪ್ಪ ಎನ್., ಮಲ್ಲಿಕಾರ್ಜುನ ಹೊಸಮನಿ, ಉಮಾ ಕೆ., ಪ್ರವೀಣ ಸಿ.ಎಲ್., ಬಲವಂತರಾಯ ಪಾಟೀಲ ಇತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಏರುತ್ತಲಿದೆ ಕರೊನಾ ಪಾಸಿಟಿವಿಟಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಪಾಸಿಟಿವಿಟಿ ದರ ಹೆಚ್ಚುತ್ತಲೇ ಇದೆ. ಇತ್ತೀಚಿನ ತಿಂಗಳುಗಳಲ್ಲೇ ಅತಿಹೆಚ್ಚು ಪಾಸಿಟಿವಿಟಿ ಶೇ. 17.69 ಭಾನುವಾರ ದಾಖಲಾಗಿದೆ. ಈ ತಿಂಗಳ ಆರಂಭದ ವೇಳೆಗೆ, ಒಟ್ಟು ಮಾದರಿ ಪರೀಕ್ಷಿಸಿದ್ದರಲ್ಲಿ ಶೇ. 1ರಷ್ಟು ಮಾತ್ರ ಕರೊನಾ ಸೋಂಕು ಕಂಡುಬರುತ್ತಿತ್ತು. ಇದು ಮೊದಲ ವಾರದಲ್ಲಿ ಶೇ. 5ನ್ನು ದಾಟಿರಲಿಲ್ಲ. ಎರಡನೇ ವಾರದಲ್ಲಿ ಸ್ವಲ್ಪ ಜಾಸ್ತಿಯಾಯಿತು. ಕಳೆದ ತಾ. 10ರಂದು ಶೇ. 7.53, 11ರಂದು 6.28, 12ರಂದು 6.39, 13ರಂದು 10.07, 14ರಂದು ಶೇ. 14.86 ಪಾಸಿಟಿವಿಟಿ ಬಂದಿತ್ತು. 15ರಂದು ಸ್ವಲ್ಪ ಕಡಿಮೆ (ಶೇ. 12.78) ದಾಖಲಾಗಿತ್ತು. ಭಾನುವಾರ ಸಂಜೆಯ ವರದಿಯಲ್ಲಿ ಮತ್ತೆ ಜಾಸ್ತಿಯಾಗಿದೆ. ಒಂದು ದಿನ ಪಾಸಿಟಿವಿಟಿ ಕಡಿಮೆಯಾದರೆ ಸಮಾಧಾನ ಪಟ್ಟುಕೊಳ್ಳುವ ಹಾಗಿಲ್ಲ. ವಾರಗಟ್ಟಲೇ ಕಡಿಮೆ ಪಾಸಿಟಿವಿಟಿ ಬಂದರೆ ಮತ್ತು ನಂತರವೂ ಕಡಿಮೆಯಾಗುತ್ತಲೇ ಹೋದರೆ ಮಾತ್ರ ಕರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಅರ್ಥೈಸಬಹುದು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net