ಕಳ್ಳರಿಗೆ ಚಳ್ಳೆಹಣ್ಣು ತಿನ್ನಿಸಿದ ಜೋಡೆತ್ತು

IMG-20230811-WA0146
Published on

ಯಾದಗಿರಿ: ರೈತ ದೇಶದ ಬೆನ್ನೆಲುಬಾದರೆ, ಎತ್ತುಗಳು ರೈತನ ಬೆನ್ನೆಲುಬು. ರೈತ-ಮಣ್ಣು-ಎತ್ತುಗಳು ಈ ಮೂರರ ಬಂಧವನ್ನು ಯಾರಿಂದಲೂ ಬಿಡಿಸಲಾಗದು ಎಂಬ ಮಾತು ಅಕ್ಷರಶಃ ಸತ್ಯ ಎಂಬುದನ್ನು ಈ ಘಟನೆಯಿಂದ ಸಾಬೀತಾಗಿದೆ.


ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ರೈತ ತಿರುಪತಿ ಎಂಬುವವರಿಗೆ ಸೇರಿದ್ದ ಜೋಡೆತ್ತುಗಳನ್ನು ಮನೆ ಮುಂದೆ ಕಟ್ಟಿದ್ದ ವೇಳೆ ಶುಕ್ರವಾರ ಕಳ್ಳರು ಕದ್ದೊಯ್ದಿದ್ದಾರೆ. ಬೆಳಗ್ಗೆ ಶೆಡ್ನಲ್ಲಿ ಎತ್ತುಗಳು ಇಲ್ಲದ ಕಾರಣ ಎಲ್ಲೆಡೆ ಹುಡುಕಾಡಿದ ತಿರುಪತಿಗೆ ಕೊನೆಗೆ ಯಾರೋ ಕಳ್ಳತನ ಮಾಡಿದ್ದಾರೆ ಎಂಬುದು ಖಾತ್ರಿಯಾಗಿದೆ. ಬಿಕ್ಕಿಬಿಕ್ಕಿ ಅಳುವುದನ್ನು ಕಂಡು ನೆರೆಹೊರೆಯವರು ಎಷ್ಟೇ ಸಂತೈಸಿದರೂ, ತಿರುಪತಿಯ ದುಃಖ ಮಾತ್ರ ಕಡಿಮೆಯಾಗಲಿಲ್ಲ.

1.5 ಲಕ್ಷ ರೂ.ಗಳಿಗೆ ಜೋಡೆತ್ತುಗಳನ್ನು ಖರೀದಿಸಿದ್ದ ರೈತ, ಅವುಗಳನ್ನು ಸ್ವಂತ ಮಕ್ಕಳಂತೆ ಪೋಷಿಸುತ್ತಿದ್ದ. ಕಳ್ಳತನವಾದ ಕಾರಣ ಶೆಡ್ ಮುಂದೆಯೇ ಕುಳಿತು ಅಳುವ ವೇಳೆ ಇದ್ದಕ್ಕಿದ್ದಂತೆ ಎತ್ತುಗಳು ಊರಲ್ಲಿ ಪ್ರತ್ಯಕ್ಷ್ವಆಗಿವೆ. ಕಳ್ಳರಿಂದ ತಪ್ಪಿಸಿಕೊಂಡ ಜೋಡೆತ್ತುಗಳು ಸುಮಾರು 10 ಕಿ.ಮೀಟರ್ ದೂರದಿಂದ ಗ್ರಾಮಕ್ಕೆ ಬಂದು ತಲುಪಿವೆ. ಊರ ಮುಂದೆ ಬಂದು ನಿಂತಾಗ ಗಮನಿಸಿದ, ಜನತೆ `ತಿರುಪತಿ ನಿನ್ನ ಎತ್ತು ಸಿಕ್ಕಿವೆ' ಎಂದು ಹೇಳಿದ ತಕ್ಷಣ ಆ ಅನ್ನದಾತನ ಸಂತಸಕ್ಕೆ ಪಾರವೇ ಇರಲಿಲ್ಲ. ಮನೆಯಿಂದ ಓಡೋಡಿ ಬಂದು ಮರಳಿ ಬಂದ ತನ್ನ ಜೋಡೆತ್ತುಗಳ ಮೈ ಸವರಿ ನೀರು ಕುಡಿಸಿದ ರೈತ ಅವುಗಳಿವೆ ಮೇವು ಹಾಕಿ, ಗಂಟೆಗಟ್ಟಲೇ ಮುಂದೆ ಕುಳಿತು ಸಮಾಧಾನಗೊಂಡ.

ಜಾಗತೀಕರಣದ ಇಂದಿನ ಭರಾಟೆಯಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ಗ್ರಾಮೀಣ ಭಾಗದ ರೈತರಲ್ಲಿರುವ ಬೂತದಯೆ ಮುಂದೆ ಎಲ್ಲವೂ ಕುಬ್ಜವೇ ಸರಿ ಎನ್ನುವುದಕ್ಕೆ ಈ ಜೋಡೆತ್ತುಗಳೇ ಸಾಕ್ಷಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net