

ಮೈಸೂರು: ಎಂಟು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ 18 ಲಕ್ಷ ರೂ. ಮೌಲ್ಯದ 217 ಗ್ರಾಂ ಚಿನ್ನಾಭರಣಗಳು, 1.560 ಕೆಜಿ ಬೆಳ್ಳಿ ಪದಾರ್ಥಗಳು ಮತ್ತು 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ನರಸಿಂಹರಾಜ ಪೊಲೀಸ್ ಠಾಣೆಯ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಇತ್ತೀಚೆಗೆ ಮಂಡಿ ಮೊಹಲ್ಲಾದ 2ನೇ ಈದ್ಗಾದ ಬಳಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು.
ಆತನು ಮತ್ತೊಬ್ಬ ಆರೋಪಿಯೊಂದಿಗೆ ಸೇರಿ ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 7 ಕಳವು ಹಾಗೂ 1 ದ್ವಿಚಕ್ರವಾಹನ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಈ ಪತ್ತೆ ಕಾರ್ಯದಿಂದ ನಜರ್‌ಬಾದ್ ಠಾಣೆಯ -1, ನರಸಿಂಹರಾಜ ಠಾಣೆಯ-1, ಹುಣಸೂರು ಠಾಣೆಯ -4 ಮತ್ತು ಕೆ. ಆರ್ ನಗರ ಪೊಲೀಸ್ ಠಾಣೆಯ -2 ಸೇರಿದಂತೆ 8 ಪ್ರಕರಣಗಳು ಪತ್ತೆಯಾಗಿವೆ.
ಅಲ್ಲದೆ ಈ ಆರೋಪಿಯು ನಗರದ 4 ಕಳವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದು, ಈ ಆರೋಪಿಯು ಪತ್ತೆಯಾದಂತಾಗಿದೆ. ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.