ಕಳ್ಳ ಪೆದ್ದಣ್ಣ ಶರಣನಾದ ಪವಾಡ

sharana chin. goshti 12
೧೨ ನೇ ಮಾಸಿಕ ಶರಣ ಚಿಂತನ ಗೋಷ್ಠಿ
Published on

ಬಾಗಲಕೋಟೆ: ಉರಿಲಿಂಗ ಪೆದ್ದಣ್ಣ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದವನು. ಬಸವಣ್ಣವರ ಸೆಳೆತಕ್ಕೆ ಒಳಗಾಗಿ ಪರಮ ಶಿವಯೋಗಿಯಾಗಿದನು ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಪಕಿ ಡಾ.ವೀಣಾ ಕಲ್ಮಠ ಹೇಳಿದರು.


ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಸಾಯಿ ಮಂದಿರದಲ್ಲಿ ಶುಕ್ರವಾರ ಕುಮಾರ ವಿಶ್ವಧರ್ಮ ಶಾಂತಾಶ್ರಮ, ಸಮಾನ ಮನಸ್ಕ ಹಿರಿಯ ನಾಗರಿಕ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಹಾಗೂ ವರದಾನೇಶ್ವರಿ ಮಹಿಳಾ ಮಂಡಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೧೨ ನೇ ಮಾಸಿಕ ಶರಣ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣ ಉರಿಲಿಂಗ ಪೆದ್ದಿ ಜೀವನ ಎಲ್ಲರಿಗೂ ಮಾದರಿಯಾಗಿದೆ. ತಪ್ಪುಗಳನ್ನು ತಿದ್ದಿ ನಡೆಯುವವರಿಗೆ ಮಹತ್ವ ಸಂದೇಶ ಸಾರಿದ್ದಾರೆ ಎಂದರು.

ಉರಿಲಿಂಗದೇವರು ಭಕ್ತರ ಮನೆಯಲ್ಲಿ ಇಷ್ಟಲಿಂಗ ದೀಕ್ಷೆಯನ್ನು ಕೊಡುತ್ತಿದ್ದ ಸಂದರ್ಭವನ್ನು ನೋಡಿ ಮನಃ ಪರಿವರ್ತಿತನಾಗಿ, ಉರಿಲಿಂಗದೇವರ ಶಿಷ್ಯನಾಗಿ, ಲಿಂಗ ಪೂಜಕನಾಗಿ ಸಾಧನೆಗೈದು ಶಿವಶರಣನಾಗಿ, ವಚನ ರಚಿಸಿದ, ಪವಾಡಗಳನ್ನು ಮೆರೆದ ಎಂದು ಬಣ್ಣಿಸಿದರು.

ವೀರಶೈವ ಲಿಂಗಾಯತ ಮಹಸಭಾ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ಉರಿಲಿಂಗಪೆದ್ದಿ ಹೆಸರಿನ ಮಠ ಒಂದು ನಮ್ಮ ಜಿಲ್ಲೆಯ ಹುನಗುಂದದ ಬಳಿಯಿರುವ ನಂದವಾಡಿಗಿಯಲ್ಲಿದೆ ಮತ್ತು ಆತನ ಹೆಸರಿನ ಅನೇಕ ಮಠಗಳಿವೆ, ಆ ದಿಶೆಯಲ್ಲಿ ಸಂಶೋದನೆಯ ಅಗತ್ಯವಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ, ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ಎಸ್.ಪಾಟೀಲ, ಎ.ಎಸ್.ಪಾವಟೆ ಉಪಸ್ಥಿತರಿದ್ದರು. ಅಕ್ಷತಾ ರೇವಡಿಗಾರ ವಚನ ಪ್ರಸ್ತುತ ಪಡಿಸಿದರು. ಸಿ.ಎಸ್.ಪತ್ತಾರ ವಂದಿಸಿದರು. ಬಸವರಾಜ ತಿಪಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net