ಕಳೆನಾಶಕ ಬಳಸಿ ಹತ್ತಿ ಫಸಲು ಹಾಳು!

lxr
Published on

ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮದ ರೈತ ತಾನೇ ಕಷ್ಟಪಟ್ಟು ಬಿತ್ತಿ, ಬೆಳೆದು ಸಂರಕ್ಷಿಸಿದ ಹತ್ತಿ ಬೆಳೆಯನ್ನು ತನ್ನ ಕೈಯಾರ ಕಳೆನಾಶಕ ಸಿಂಪಡಿಸಿ ಹಾಳು ಮಾಡಿಕೊಂಡ ಘಟನೆ ಜರುಗಿದೆ. ಅಜ್ಞಾನ, ತಪ್ಪುಕಲ್ಪನೆಯಿಂದ ಸಮೃದ್ಧವಾಗಿ ಬೆಳೆದಿದ್ದ ಫಸಲಿಗೆ ಕಳೆನಾಶಕ ಸಿಂಪಡಿಸಿ ಈಗ ಮಮ್ಮಲ ಮರುಗುತ್ತಿದ್ದಾನೆ.

ಬೆಳೆ ಹಾಳಾಗಿರುವ ಜಮೀನಿಗೆ ಸೋಮವಾರ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಮತ್ತು ರೈತ ಮುಖಂಡ ಚನ್ನಪ್ಪ ಷಣ್ಮುಕಿ ಭೇಟಿ ನೀಡಿ ರೈತನಿಗೆ ಸಮಾಧಾನ ಹೇಳಿದ್ದಾರೆ.

ಏನಾಗಿದೆ?:

ಗೊಜನೂರ ಗ್ರಾಮದ ರೈತ ತಾಜುದ್ದೀನ್ ಆನಿ ತನ್ನ 6 ಎಕರೆ ಜಮೀನಿನಲ್ಲಿ 3 ಎಕರೆ ಗೋವಿನಜೋಳ, 3 ಎಕರೆ ಹತ್ತಿ ಬಿತ್ತನೆ ಮಾಡಿದ್ದಾರೆ. ಗೋವಿನ ಜೋಳದಲ್ಲಿನ ಕಳೆ ನಿಯಂತ್ರಣಕ್ಕಾಗಿ ಲಕ್ಷ್ಮೇಶ್ವರದ ಕೃಷಿ ಪರಿಕರ ಮಾರಾಟದ ಅಂಗಡಿಯಿಂದ ಕಳೆನಾಶಕ ಕೇಳಿ ತಂದಿದ್ದಾರೆ. ಮೊದಲು ಗೋವಿನ ಜೋಳದ ಬೆಳೆಗೆ ಸಿಂಪಡಣೆ ಮಾಡಿದ್ದಾರೆ. ನಂತರ ಅದೇ ಕಳೆನಾಶಕವನ್ನು 3 ಎಕರೆ ಹತ್ತಿಗೂ ಸಿಂಪಡಿಸಿದ್ದಾರೆ. ಗೋವಿನ ಜೋಳದ ಕಳೆನಾಶಕ ಹತ್ತಿಗೆ ಅಪಾಯಕಾರಿ ಎಂಬುದರ ಅರಿವು ಇಲ್ಲದೆ ಈ ಅವಾಂತರ ಆಗಿದೆ. ಇದಾದ ನಾಲ್ಕು ದಿನದಲ್ಲೇ ಹತ್ತಿ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಹೊಲಕ್ಕೆ ಬಂದು ನೋಡಿದ ತಾಜುದ್ದೀನ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತನ್ನ ತಪ್ಪಿಗೆ ಯಾರನ್ನೂ ದೂಷಿಸಲಾಗದೆ ಒಳಗೊಳಗೇ ಸಂಕಟ ಪಟ್ಟಿದ್ದಾರೆ. ಕಳೆನಾಶಕದಿಂದ ಪಕ್ಕದ ಹೊಲದ ಹೆಸರು ಬೆಳೆಯೂ ಒಂದಿಷ್ಟು ಹಾಳಾಗಿದೆ. ಮೂರು ಎಕರೆ ಹತ್ತಿ ಬೆಳೆಯಲು ಜಮೀನು ಹದಗೊಳಿಸುವುದು, ಬೀಜ, ಗೊಬ್ಬರ, ಎಡೆ, ಕೃಷಿ ಕೂಲಿಕಾರರ ಖರ್ಚು ಸೇರಿ ಕನಿಷ್ಠ 30 ಸಾವಿರ ರೂ. ಖರ್ಚು ಮಾಡಿಕೊಂಡಿದ್ದಾನೆ.

ಬೆಳೆ ವೀಕ್ಷಣೆ ಮಾಡಿ ಮಾತನಾಡಿದ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಕೃಷಿ ಕೂಲಿಕಾರರ ಕೊರತೆ ಇರುವುದು ನಿಜ. ಈ ಕಾರಣಕ್ಕೆ ಅತಿಯಾದ ಕಳೆನಾಶಕದ ಬಳಸಿದರೆ ಅಪಾಯಕಾರಿ. ಕೀಟನಾಶಕ ಬಳಸುವುದಿದ್ದರೆ ಅದನ್ನೇ ಕೇಳಬೇಕು. ಕಳೆನಾಶಕ ಸಿಂಪಡಣೆ ಮಾಡುವ ಮೊದಲು ಕೃಷಿ ಅಧಿಕಾರಿಗಳು, ನುರಿತ ಮಾರಾಟಗಾರರು, ಪ್ರಗತಿಪರ ರೈತರ ಸಲಹೆ ಪಡೆಯಬೇಕು. ಕಳೆ ನಾಶಕದಿಂದ ಬೆಳೆಹಾನಿಯಾದರೆ ಪರಿಹಾರ, ಸಹಾಯಧನ ಸಿಗದು. ಕಳೆನಾಶಕದಿಂದ ಭೂಮಿಯಲ್ಲಿನ ಬೆಳೆ ಪೋಷಕ, ಸೂಕ್ಷ್ಮಾಣು ಜೀವಿಗಳು ಸಹ ನಾಶವಾಗುತ್ತವೆ. ಅಳಿಲು, ಹಾವು, ಮೊಲ, ಬೆಕ್ಕು, ಪಕ್ಷಿ ಸಂಕುಲಕ್ಕೂ ಇದರಿಂದ ಕಂಟಕ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net