ಕಳೆದ ಎಂಟು ವರ್ಷಗಳಿಂದ ಶೇ.100 ಫಲಿತಾಂಶ ಪಡೆದು ಮಾದರಿಯಾದ ಅಟ್ಟಾವರ ಸರ್ಕಾರಿ ಪ್ರೌಢಶಾಲೆ!

07_HSN_01
Published on

ಹಾಸನ: ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಶಿಕ್ಷಕರಿಲ್ಲ, ಇದ್ದರೂ ಸರಿಯಾಗಿ ಕಲಿಸಲ್ಲ, ಕಲಿಕೆಗೆ ಬೇಕಾದ ಪೂರಕ ಸಾಮಗ್ರಿಗಳಿಲ್ಲ ಎಂಬ ಕಾರಣಗಳಿಂದ ಹಲವು ಪಾಲಕರು ತಮ್ಮ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸದೆ ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವ ಸಮಯದಲ್ಲಿ ಹಾಸನ ತಾಲೂಕಿನ ಅಟ್ಟಾವರ ಗ್ರಾಮದ ಸರ್ಕಾರಿ ಶಾಲೆಯ ಶೈಕ್ಷಣಿಕ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಕಳೆದ ಎಂಟು ವರ್ಷಗಳಿಂದ ಸತತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ದಾಖಲೆ ನಿರ್ಮಿಸಿದೆ. 2017-18ನೇ ಶೈಕ್ಷಣಿಕ ವರ್ಷದಿಂದ ಈವರೆಗೆ ಶಾಲೆಯ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿಲ್ಲ.

ಈ ವರ್ಷದ ಆರಂಭದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ ಏಳು ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡರೆ, 14 ಮಂದಿ ಪ್ರಥಮ ದರ್ಜೆ ಅಂಕ ಗಳಿಸಿದ್ದಾರೆ. ಈ ವರ್ಷದ ಡಿಸ್ಟಿಂಕ್ಷನ್ ಮತ್ತು ಪ್ರಥಮ ದರ್ಜೆ ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಶಿಕ್ಷಣದ ಗುಣಮಟ್ಟವು ಶೇಕಡಾವಾರು ಶೇ.86.95 ರಷ್ಟಿದೆ. 2017ರಿಂದ ಇಲ್ಲಿಯವರೆಗೆ 210 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ ಎಂಬುದೇ ಈ ಶಾಲೆಯ ವಿಶೇಷವಾಗಿದೆ.

ಶಾಲೆಯ ಈ ಸಾಧನೆಗೆ ಮೂಲ ಕಾರಣಕರ್ತರು ಪ್ರಸ್ತುತ ಅರಕಲಗೂಡು ಬಿಇಒ ಆಗಿರುವ ಕೆ.ಪಿ. ನಾರಾಯಣ್ ಅವರು. 2017ರಲ್ಲಿ ಅಟ್ಟಾವರ ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಂದ ಇವರು ತೆಗೆದುಕೊಂಡ ಕ್ರಮಗಳಿಂದ ಹಾಗೂ ಅದೇ ಪರಿಪಾಠವನ್ನು ಅಲ್ಲಿನ ಶಿಕ್ಷಕ ವರ್ಗದವರು ಪಾಲಿಸಿಕೊಂಡು ಬಂದಿರುವುದರಿಂದ ಸತತವಾಗಿ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಕೆ.ಪಿ. ನಾರಾಯಣ ಅವರು ಇಲ್ಲಿಗೆ ಬಂದಾಗ ಈ ಪ್ರೌಢಶಾಲೆಯ ಹಿಂದಿನ ವರ್ಷಗಳ ಫಲಿತಾಂಶ ಶೇ.50, ಶೇ.60 ಹೀಗೆ ಇತ್ತು. ಇದನ್ನು ಬದಲಾಯಿಸಬೇಕು ಎಂದು ಪಣ ತೊಟ್ಟ ನಾರಾಯಣ ಅವರು ಶಾಲೆಯಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಬದಲಾವಣೆಗಳನ್ನು ತಂದರು.

ಪ್ರಮುಖವಾಗಿ ಇವರು ‘ತಿಂಗಳ ಗುರಿ 5’ ಎಂಬ ಯೋಜನೆ ರೂಪಿಸಿದರು. ಅಂದರೆ ಪ್ರತಿ ಪಾಠದಲ್ಲಿ ಬರುವಂತಹ ಪ್ರಮುಖ ಪ್ರಶ್ನೆಗಳನ್ನು ಶಿಕ್ಷಕರಿಂದ ಸಿದ್ಧಪಡಿಸುವುದು. ಆ ಪ್ರಶ್ನೆಗಳನ್ನು ಮಕ್ಕಳಿಗೆ ಟೆಸ್ಟ್ ರೀತಿ ಬರೆಸುವುದು. ಅದಕ್ಕೆ ಪ್ರತಿ ಮಕ್ಕಳು ಐದು ಅಂಕಗಳನ್ನು ಪಡೆಯುವ ಸವಾಲನ್ನು ಅವರ ಮುಂದೆ ಇರಿಸಲಾಗಿತ್ತು. ಒಂಭತ್ತು ತಿಂಗಳ ಅವಧಿಯಲ್ಲಿ ಪ್ರತಿ ಮಕ್ಕಳು 45 ಅಂಕಗಳನ್ನು ಪಡೆಯುವಷ್ಟು ತಯಾರಿ ಮಾಡಲಾಗುತ್ತಿತ್ತು. ಹೀಗಾಗಿ ಒಬ್ಬನೇ ಒಬ್ಬ ವಿದ್ಯಾರ್ಥಿ ಕೂಡ ಅನುತ್ತೀರ್ಣನಾಗಲು ಸಾಧ್ಯವೇ ಇಲ್ಲ. ಇನ್ನು ಪ್ರತಿಭಾವಂತರು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅಂಕಗಳನ್ನು ಪಡೆಯಬಹುದಾಗಿತ್ತು.

ಇದರ ಜತೆಗೆ ಗುಂಪುಗಳನ್ನು ಮಾಡಿ ಗುಂಪು ಅಧ್ಯಯನಕ್ಕೆ ಆದ್ಯತೆ ನೀಡಲಾಯಿತು. ಅಷ್ಟೇ ಅಲ್ಲದೇ ಪ್ರತಿ ಗುಂಪಿಗೂ ಟೆಸ್ಟ್‌ಗಳನ್ನು ನೀಡಿ ಯಾವ ಗುಂಪು ಹೆಚ್ಚು ಅಂಕ ಪಡೆಯುತ್ತಾರೋ ಆ ಗುಂಪಿಗೆ ಬಹುಮಾನ ನೀಡಲಾಗುತ್ತಿತ್ತು. ಇದರಿಂದ ಗುಂಪು ಗುಂಪುಗಳ ನಡುವೆ ಅಂಕ ಪಡೆಯಲು ಪೈಪೋಟಿ ಏರ್ಪಡುತ್ತಿತ್ತು. ಹಾಗೆಯೇ ತರಗತಿ ಕಿರು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನಗಳನ್ನು ನೀಡಲಾಗುತ್ತಿತ್ತು. ಹುಡುಗರಿಗೆ ರಾತ್ರಿ ವೇಳೆಯೂ ಶಿಕ್ಷಕರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಎಲ್ಲ ಶಿಕ್ಷಕರು ಮನೆ ಮನೆಗಳಿಗೆ ತೆರಳಿ ಮಕ್ಕಳ ಅಧ್ಯಯನವನ್ನು ಪರಿಶೀಲಿಸುತ್ತಿದ್ದರು, ಕೆಲವೊಮ್ಮೆ ಮನೆ ಮನೆ ಪಾಠಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಎಲ್ಲ ಕ್ರಮಗಳಿಂದಾಗಿ ಶಾಲೆಯ ವಿದ್ಯಾರ್ಥಿಗಳು ಪಾಸಾಗಿ ಶೇ.100 ಫಲಿತಾಂಶ ಬರಲು ಕಾರಣವಾಯಿತು. 2021ಕ್ಕೆ ನಾರಾಯಣ ಅವರ ವರ್ಗವಾದ ನಂತರ ನಂತರ ಬಂದ ಮುಖ್ಯೋಪಾಧ್ಯಾಯ ಎಚ್.ಪಿ. ರಾಜಶೇಖರ್ ಹಾಗೂ ಶಿಕ್ಷಕರು ಇದೇ ಕ್ರಮವನ್ನು ಅನುಸರಿಸಿದ್ದರಿಂದ ಕಳೆದ ಎಂಟು ವರ್ಷಗಳಿಂದ ಶಾಲೆ ಶೇ.100ರ ಫಲಿತಾಂಶ ಪಡೆಯುತ್ತಿದೆ.

ನಾನು ಆ ಶಾಲೆಯ ಮುಖ್ಯೋಪಾಧ್ಯಾಯನಾಗಿ ಹೋದಾಗ ವಿದ್ಯಾರ್ಥಿಗಳಿಗೆ ಕಠಿಣ ಎನಿಸುವ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಯಿತು. ಘಟಕ ಪರೀಕ್ಷೆ, ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ, ಪೋಷಕರ ಸಭೆ, ನಿಧಾನ ಕಲಿಕೆಯ ವಿದ್ಯಾರ್ಥಿಗಳತ್ತ ಹೆಚ್ಚಿನ ಗಮನ, ಗುಂಪು ಬೋಧನೆ, ರಜಾ ದಿನಗಳಲ್ಲೂ ವಿಶೇಷ ತರಗತಿಗಳು, ರಾತ್ರಿ ತರಗತಿಗಳು, ಘಟಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಪ್ರಶಸ್ತಿ ಸೇರಿದಂತೆ ಹಲವಾರು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಸರಳವಾಗಿ ವಿಷಯ ಅರ್ಥೈಸುವ ಕಾರ್ಯ ಮಾಡಲಾಯಿತು. ಹೀಗಾಗಿ ಈ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಅರಕಲಗೂಡು ಬಿಇಒ ಕೆ.ಪಿ. ನಾರಾಯಣ ಹೇಳುತ್ತಾರೆ.

ಈ ವರ್ಷದ ಶೇ. 100 ಫಲಿತಾಂಶದ ಜತೆಗೆ ಇದೆ ಮಾರ್ಗದಲ್ಲಿ 8 ವರ್ಷ ಸತತ ಶೇ.100 ಫಲಿತಾಂಶ ತಂದು ಕೊಟ್ಟಿರುವುದು ಸಂತಸದ ವಿಷಯವಾಗಿದೆ. ಇದಕ್ಕೆ ಎಲ್ಲ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಶ್ರಮವಿದೆ ಮತ್ತು ಘಟಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ನೀಡುವಂತಹ ಪ್ರಯತ್ನಗಳು ಒಳ್ಳೆಯ ಫಲಿತಾಂಶವನ್ನು ನೀಡಿತು. ಪೋಷಕರು ಧೈರ್ಯವಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಬಹುದು ಎಂದು ಅಟ್ಟಾವರ ಪ್ರೌಢಶಾಲೆ ಮುಖ್ಯೊಪಾಧ್ಯಯ ಎಚ್.ಪಿ. ರಾಜಶೇಖರ್ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net