ಕಳೆಗುಂದಿದ ಹುಬ್ಬಳ್ಳಿ ಮಾರುಕಟ್ಟೆ

H23 Market 3
Published on

ಹುಬ್ಬಳ್ಳಿ: ಕರೊನಾ ಎರಡನೇ ಅಲೆ ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಗುರುವಾರ ನಗರದ ಮಾರುಕಟ್ಟೆ ಕಳೆಗುಂದಿತ್ತು. ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ಇರುವ ಕಾರಣ ಅಗತ್ಯ ವಸ್ತು ಖರೀದಿಗೆ ಬಂದಿದ್ದ ಗ್ರಾಹಕರು ಪರದಾಡಿದರು.

ಅವಳಿ ನಗರದಲ್ಲಿ ಕಠಿಣ ನಿಯಮ ಜಾರಿಯಾದ ಪರಿಣಾಮ ಪೊಲೀಸರು ಬೆಳಗ್ಗೆಯಿಂದಲೇ ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಇತರೆ ಅಂಗಡಿಗಳನ್ನು ಮುಚ್ಚಿಸಿದರು. ಚನ್ನಮ್ಮ ವೃತ್ತ, ಜನತಾ ಬಜಾರ್, ದಾಜಿಬಾನ ಪೇಟೆ ಕೊಪ್ಪಿಕರ ರಸ್ತೆ, ದುರ್ಗದ ಬೈಲ್, ಕೇಶ್ವಾಪುರ, ಸಿಬಿಟಿ, ಹಳೇ ಹುಬ್ಬಳ್ಳಿ, ನವನಗರ, ಉಣಕಲ್ ಸೇರಿದಂತೆ ನಗರದ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಅಂಗಡಿ- ಮುಂಗಟ್ಟುಗಳನ್ನು ತೆರೆಯದಂತೆ ವ್ಯಾಪಾರಸ್ಥರಿಗೆ ಸೂಚಿಸಿದರು. ಕರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು. ದೇವಸ್ಥಾನ, ದರ್ಗಾ, ಚರ್ಚ್ ಬಾಗಿಲು ಮುಚ್ಚಿಸಿದರು.

ನಗರದ ಪ್ರಮುಖ ತರಕಾರಿ ಮಾರುಕಟ್ಟೆಗಳನ್ನು ಬಂದ್ ಮಾಡಿಸಲಾಗಿದೆ. ಜನತಾ ಬಜಾರ್, ದುರ್ಗದ ಬೈಲ್, ಸರಾಫ ಗಟ್ಟಿ ತರಕಾರಿ ಮಾರುಕಟ್ಟೆಗಳನ್ನು ಗಿರಣಿ ಚಾಳ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಉಳಿದಂತೆ ಆಯಾ ಬಡಾವಣೆಗಳಲ್ಲಿ ಪರಸ್ಪರ ಅಂತರದೊಂದಿಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕೇಶ್ವಾಪುರ ಆಜಾದ್ ಕಾಲನಿಯಲ್ಲಿ ಶುಕ್ರವಾರದ ಸಂತೆಯಲ್ಲಿ ಎಂದಿನಂತೆ ಜನದಟ್ಟಣೆ ಇತ್ತು. ಪಾಲಿಕೆ ಸಿಬ್ಬಂದಿ ವ್ಯಾಪಾರಿಗಳಿಗೆ ಕುಳಿತುಕೊಳ್ಳಲು ಸ್ಥಳ ಗುರುತು ಮಾಡಿದ್ದರು.

ಶುಕ್ರವಾರ ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಕಠಿಣ ನಿಯಮ ಜಾರಿಯಾಗುವ ಕಾರಣ ಅಗತ್ಯ ವಸ್ತುಗಳ ಖರೀದಿಗೆಂದು ಮಾರುಕಟ್ಟೆಗೆ ಆಗಮಿಸಿದ್ದ ಜನ ಪರದಾಡಿದರು. ಬಾರ್​ಗಳ ಮುಂದೆ ಮದ್ಯಪ್ರಿಯರ ದಂಡೇ ನೆರೆದಿತ್ತು. ದಾಜಿಬಾನ ಪೇಟೆ, ಜನತಾ ಬಜಾರ್​ನಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಯಾವ ಅಂಗಡಿ ತೆರೆಯಬೇಕು, ಯಾವ ಅಂಗಡಿ ಬಂದ್ ಮಾಡಬೇಕೆಂಬ ಗೊಂದಲ ಹಲವರಲ್ಲಿತ್ತು. ಬಡಾವಣೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net