ಕಳಾಹೀನವಾಗುತ್ತಿರುವ ನಂದಿ ರಾಸುಗಳ ಸಂತೆ

19CBP2a (1)
Published on

ಚಿಕ್ಕಬಳ್ಳಾಪುರ : ಹೆಸರಾಂತ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ಆಲಯದ ಜಾತ್ರೆ ಹಿನ್ನೆಲೆಯಲ್ಲಿ ನಡೆಯುವ ದನಗಳ ಸಂತೆಗೆ ಈ ಬಾರಿಯೂ ಕಡಿಮೆ ಸಂಖ್ಯೆಯಲ್ಲಿ ರಾಸುಗಳು ಬಂದಿದ್ದು ವರ್ಷದಿಂದ ವರ್ಷಕ್ಕೆ ಕಳಾಹೀನವಾಗುತ್ತಿರುವುದು ಬೇಸರಕ್ಕೆ ಕಾರಣವಾಗಿದೆ.

ಮಹಾಶಿವರಾತ್ರಿ ಹಬ್ಬಕ್ಕೆ ಪ್ರತಿ ವರ್ಷ ಇಲ್ಲಿನ ಆಲಯದಲ್ಲಿ ಬ್ರಹ್ಮ ರಥೋತ್ಸವ ಆಕರ್ಷಕವಾಗಿ ನಡೆಯುತ್ತದೆ. ರಾಜ್ಯ ಮಾತ್ರವಲ್ಲದೇ ಆಂಧ್ರ, ತಮಿಳುನಾಡು ಸೇರಿ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹಬ್ಬದ ಜಾಗರಣೆ, ದೇವರಿಗೆ ವಿಶೇಷ ಪೂಜೆ ಸಲ್ಲಿಕೆ, ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ಖುಷಿ ಅನುಭವಿಸುತ್ತಾರೆ. ಇದಕ್ಕೆ ಅನುಗುಣವಾಗಿ ಮುಜರಾಯಿ ಮತ್ತು ಶ್ರೀ ಭೋಗನಂದೀಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಇದರಲ್ಲಿ ದನಗಳ ಸಂತೆಯೂ ಒಂದು. ಹಿಂದೆ ಬಳ್ಳಾರಿ, ಹಾವೇರಿ, ರಾಯಚೂರು ಸೇರಿ ರಾಜ್ಯದ ವಿವಿಧೆಡೆ ಹಾಗೂ ಆಂಧ್ರಪ್ರದೇಶದ ಗೋರುಂಟ್ಲ ಮತ್ತಿತರೆಡೆಯಿಂದ ಗರಿಷ್ಠ 2 ಸಾವಿರ ಹಸುಗಳು ಆಗಮಿಸುತ್ತಿದ್ದವು. ಆದರೆ, ಇತ್ತೀಚೆಗೆ ಸಂಖ್ಯೆ 300 ಕ್ಕೆ ಇಳಿದಿದೆ.

ಫೆ.21 ಮಹಾಶಿವರಾತ್ರಿ ಹಬ್ಬ, 22 ರಂದು ಬ್ರಹ್ಮ ರಥೋತ್ಸವ. ಇದಕ್ಕೆ ಒಂದು ವಾರದ ಮೊದಲೇ ರಾಸುಗಳು ಆಗಮಿಸಬೇಕಾಗಿತ್ತು. ಈ ಬಾರಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರದಿಂದ ಮಾತ್ರ ಬೆರಳೆಣಿಕೆಯಲ್ಲಿ ಬಂದಿವೆ. ಜೋಡಿ ಎತ್ತುಗಳಿಗೆ ಕನಿಷ್ಠ 55 ಸಾವಿರ ರೂಗಳಿಂದ 90 ಸಾವಿರ ರೂವರೆಗೂ ಬೆಲೆ ನಿಗದಿಯಾಗಿದೆ.

ಪ್ರಸ್ತುತ ಹಲವೆಡೆ ಮಳೆ ಇಲ್ಲ, ಮೇವಿಗೂ ಬರ ಇದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳ ಸಾಕಣೆ ಮತ್ತು ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಇದರ ನಡುವೆ ಬಹುತೇಕ ರೈತರು ಜಮೀನುಗಳಲ್ಲಿ ರಾಸುಗಳ ಬದಲಿಗೆ ಕೃಷಿ ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ರಾಸುಗಳಿಗೆ ಬೇಡಿಕೆ ಇಲ್ಲ. ಕಡಿಮೆ ಬೆಲೆಗೆ ರಾಸುಗಳನ್ನು ಕೇಳಲಾಗುತ್ತಿದೆ. ಮತ್ತೊಂದೆಡೆ ಮೂಲ ಸೌಕರ್ಯಗಳ ಕೊರತೆ ಮತ್ತು ದೂರದ ಸ್ಥಳಗಳಿಗೆ ರಾಸುಗಳ ಸಾಗಣೆ ಮಾಡಬೇಕೆಂಬ ಲೆಕ್ಕಾಚಾರದಲ್ಲಿ ರೈತರು ದನಗಳ ಸಂತೆಗೆ ಆಗಮಿಸಲು ಸಮರ್ಪಕವಾಗಿ ಒಲವು ತೋರುತ್ತಿಲ್ಲ ಎನ್ನಲಾಗುತ್ತಿದೆ.

ಮೂಲಸೌಲಭ್ಯ ಕೊರತೆ : ರಾಸುಗಳೊಂದಿಗೆ ದೂರದೂರಿನಿಂದ ಆಗಮಿಸುವವರಿಗಾಗಿ ನೀರಿನ ವ್ಯವಸ್ಥೆ ಹೊರತುಪಡಿಸಿದರೆ ಇಲ್ಲಿ ಬೇರೆ ಯಾವುದೇ ಸೌಲಭ್ಯ ಇಲ್ಲ. ಮೂಲಸೌಲಭ್ಯದ ಕೊರತೆಗೆ ರೈತರು ಪರದಾಡುವಂತಾಗಿದೆ. ರಾಸುಗಳನ್ನು ಕಟ್ಟಿರುವ ಜಾಗದಲ್ಲಿಯೇ ಮಲಗಬೇಕು. ನೀರು, ಊಟಕ್ಕೂ ಕಿರಿಕಿರಿ. ವಿದ್ಯುತ್ ಸೌಲಭ್ಯ ಸಮಸ್ಯೆ ಬೇರೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.

ಪ್ರತಿ ವರ್ಷ ಶಿವರಾತ್ರಿ ದನಗಳ ಸಂತೆಗೆ ರಾಸುಗಳನ್ನು ಕರೆದುಕೊಂಡು ಬರುತ್ತವೆ. ಒಳ್ಳೆಯ ಲಾಭ ಸಿಗುವ ನಿರೀಕ್ಷೆ ಇದೆ. ಪ್ರಸ್ತುತ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ.

ಗಂಗಾಧರ್, ರಾಸು ವ್ಯಾಪಾರಿ, ಬಾಗೇಪಲ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net