

ಕಳಸ: ತಾಲೂಕಿನಲ್ಲಿ ರಾಜ್ಯ ಹೆದ್ದಾರಿಗಳ ಹದೆಗೆಟ್ಟ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಪಟ್ಟಣದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು. ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಕಳಸ ತಾಲೂಕಿನ ವಿವಿಧೆಡೆಯಿಂದ ಬಂದ ಗ್ರಾಮಸ್ಥರು ಕೆ.ಎಂ.ರಸ್ತೆ ಮತ್ತು ಮುಖ್ಯ ರಸ್ತೆ ಸೇರುವ ಭಾಗದಲ್ಲಿ ಅರ್ಧ ತಾಸು ರಸ್ತೆ ತಡೆ ನಡೆಸಿ ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.
ಸ್ಥಳಕ್ಕೆ ಆಗಮಿಸಿದ ಎಇಇ ಮಂಜುನಾಥ್, ಜೆಇ ಸತೀಶ್ ವಿರುದ್ಧ ಪ್ರತಿಭಟನಾಕಾರರು ಹರಿಹಾಯ್ದರು. ಇಂಜಿನಿಯರ್ಗಳು ಆಟೋದಲ್ಲಿ ಬಾಳೆಹೊಳೆವರೆಗೆ ಬಂದು ಪ್ರಯಾಣದ ಅನುಭವ ಪಡೆದುಕೊಳ್ಳಬೇಕು ಎಂದು ಆಟೋ ಚಾಲಕರು ಮತ್ತು ಮಾಲೀಕರು ಒತ್ತಾಯಿಸಿದರು. ಪ್ರತಿ ಬಾರಿ ಪ್ರತಿಭಟನೆ ಮಾಡುವಾಗ ಒಂದು ವಾರದಲ್ಲಿ ದುರಸ್ತಿ ಮಾಡುತ್ತೇವೆ ಎಂದು ಹೇಳಿ ನಂತರ ಇತ್ತ ಬರುವುದೇ ಇಲ್ಲ. ಸರ್ಕಾರದಿಂದ ವೇತನ ತೆಗೆದುಕೊಳ್ಳುವ ನೀವು ಸರಿಯಾಗಿ ಕೆಲಸ ಮಾಡಬೇಕು. ನಿಮ್ಮ ಆಶ್ವಾಸನೆ ನಮಗೆ ಬೇಕಾಗಿಲ್ಲ. ಯಾವತ್ತಿನಿಂದ ಕೆಲಸ ಶುರು ಮಾಡುತ್ತೀರಿ? ಇಲ್ಲವಾದರೆ ಇಲ್ಲಿಂದ ನಿಮ್ಮನ್ನು ಕದಲಲು ಬಿಡುವುದಿಲ್ಲ. ಈ ರಸ್ತೆಯ ಪರಿಸ್ಥಿತಿಯಿಂದ ಪ್ರವಾಸಿಗರು ಕೂಡ ಬಾರದಂತಹ ಪರಿಸ್ಥಿತಿ ನಿರ್ವಣವಾಗಿದೆ ಎಂದು ಕಳಸ, ಸಂಸೆ, ನೆಲ್ಲಿಬೀಡು, ಕುದುರೆಮುಖ, ಹೊರನಾಡು, ಬಾಳೆಹೊಳೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಮುಖ್ಯ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದರಿಂದ ಮೂರು ಮಾರ್ಗಗಳಲ್ಲೂ ಸುಮಾರು ಮೂರು ಕಿ.ಮೀ ದೂರ ಟ್ರಾಫಿಕ್ ಜಾಮ್ ಆಗಿತ್ತು. ಹೊರನಾಡಿಗೆ ಬಂದ ಪ್ರವಾಸಿಗರು ತೊಂದರೆ ಅನುಭವಿಸಿದರು. ಈ ಸಂದರ್ಭ ತಾವು ಬಂದ ರಸ್ತೆಯ ಪರಿಸ್ಥಿತಿ ಅರಿತು ಪ್ರವಾಸಿಗರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಅಸಮಾಧಾನ ಹೊರಹಾಕಿದರು.