

ಕಳಸ: ಕಳಸ ತಾಲೂಕಿನಲ್ಲಿ ಮಳೆ ಮುಂದುವರಿದಿದ್ದು ಶನಿವಾರ ಕಳಸ-ಹೊರನಾಡು ನಡುವಿನ ಸಂಪರ್ಕ ಸೇತುವೆ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ಸೇತುವೆ ಮುಳುಗಡೆಯಾಗಿದ್ದರಿಂದ ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿತ್ತು. ಹೊರನಾಡಿಗೆ ಬದಲಿ ಮಾರ್ಗ ಹಳುವಳ್ಳಿ ಮೂಲಕ ಲಘು ವಾಹನಗಳು ಮಾತ್ರ ಸಂಚಾರ ನಡೆಸಿದವು.
ಕಳಸ-ಕುದುರೆಮುಖ ನೆಲ್ಲಿಬೀಡು ಮುಖ್ಯರಸ್ತೆಯಲ್ಲಿ ನದಿಯ ನೀರು ರಸ್ತೆಗೆ ಬಂದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಾರ್ಲೆ ಗ್ರಾಮದಲ್ಲಿ ನದಿಯಲ್ಲಿ ನೀರು ಬಂದ ಪರಿಣಾಮ ಎಂಟು ಮನೆಗಳ ಸಂಪರ್ಕ ಕಡಿತಗೊಂಡಿತ್ತು.
ಕಳಸ ಕಲ್ಲುಬಾವಿ ಸಮೀಪ 2019ರಲ್ಲಿ ಕುಸಿದ ರಸ್ತೆ ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ಶನಿವಾರ ಮತ್ತಷ್ಟು ರಸ್ತೆ ಕುಸಿತಗೊಂಡು ಕಲ್ಲುಬಾವಿ ಗ್ರಾಮದ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.