

ಮೈಸೂರು: ಜಿಲ್ಲೆಯಲ್ಲಿ ಒಂದು ವಾರದಿಂದೀಚೆಗೆ ನಡೆದಿದ್ದ 8 ಕಳವು ಪ್ರಕರಣ ಹಾಗೂ 1 ಗಾಂಜಾ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 11.72 ಲಕ್ಷ ರೂ. ಮೌಲ್ಯದ ಕಳವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಜತೆಗೆ, 4 ದಿನಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆಗೆ ಸಂಬಂಧಿಸಿದಂತೆ 41 ಪ್ರಕರಣಗಳನ್ನು ದಾಖಲಿಸಿ 4 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯ ಗಾರ್ಡೇನಿಯ ಬಡಾವಣೆ ನಿವಾಸಿ ರಘುನಾಥ್ ಅವರ ಮನೆಯಲ್ಲಿ ಜು.12ರಂದು 145 ಗ್ರಾಂ. ಚಿನ್ನ ಕಳ್ಳತನವಾಗಿತ್ತು. ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಒಬ್ಬ ಆರೋಪಿಯನ್ನು ಬಂಧಿಸಿದ್ದು, ಆತನಿಂದ 6.54 ಲಕ್ಷ ರೂ.ಮೌಲ್ಯದ 119 ಗ್ರಾಂ. ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.
ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಬೇರೆ ಬೇರೆ ಪ್ರಕರಣಗಳಲ್ಲಿ 8 ಹಸುಗಳು ಕಳ್ಳತನವಾಗಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಆತನಿಂದ 2.75 ಲಕ್ಷ ರೂ. ಬೆಲೆಬಾಳುವ 6 ಹಸುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಅಂಕನಹಳ್ಳಿಯ ಸೈಯದ್ ಅಯಾಜ್ ಎಂಬುವರ ಅಂಗಡಿಯಲ್ಲಿ 1.50 ಲಕ್ಷ ರೂ. ಬೆಲೆ ಬಾಳುವ ಮೋಟಾರ್ ಬಿಡಿಭಾಗಗಳು, ಕಬ್ಬಿಣದ ಸಾಮಗ್ರಿ ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೆಟ್ಟದಪುರ ಠಾಣೆಯ ಪೊಲೀಸರು 3 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 1 ಲಕ್ಷ ರೂ. ಬೆಲೆ ಬಾಳುವ ಮೋಟಾರ್ ಬಿಡಿ ಭಾಗ, ಕಬ್ಬಿಣದ ಸಾಮಗ್ರಿ ಜಪ್ತಿ ಮಾಡಿದ್ದಾರೆ.
ಮೈಸೂರು ತಾಲೂಕಿನ ಹೊಸಕೋಟೆ ಗ್ರಾಮದ ಸ್ವಾಮಿಗೌಡ ಎಂಬುವರ ಮನೆಯಲ್ಲಿ 3 ಟಗರು ಮರಿಗಳು, 35 ಪಾರಿವಾಳಗಳು ಕಳ್ಳತನವಾಗಿದ್ದವು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಇಲವಾಲ ಠಾಣೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ 1.30 ಲಕ್ಷ ರೂ.ಮೌಲ್ಯದ 3 ಟಗರು ಮರಿಗಳು, 35 ಪಾರಿವಾಳಗಳನ್ನು ವಶಪಡಿಸಿಕೊಂಡಿದ್ದಾರೆ.
ಜು.16ರಂದು ನಂಜನಗೂಡು ತಾಲೂಕಿನ ರಾಮಾಪುರ ಗ್ರಾಮದ ರಾಮಚಂದ್ರರ ಜಮೀನಿನಲ್ಲಿ ಎರಡು ರೋಲ್ ಡ್ರಿಪ್‌ಪೈಪ್ ಕಳ್ಳತನವಾಗಿತ್ತು. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ 3 ಸಾವಿರ ರೂ. ಮೌಲ್ಯದ 2 ರೋಲ್ ಡ್ರಿಪ್‌ಪೈಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜು.16ರಂದು ಹುಣಸೂರು ತಾಲೂಕಿನ ಬಿಳಿಕೆರೆ ಪಟ್ಟಣದ ದಾಸ್ತಿಕೊಳ ವೃತ್ತದ ಬಳಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಅವರಿಂದ 10 ಸಾವಿರ ರೂ. ಮೌಲ್ಯದ 500 ಗ್ರಾಂ ಒಣಗಿದ ಗಾಂಜಾ ಸೊಪ್ಪುನ್ನು ವಶ ಪಡಿಸಿಕೊಳ್ಳಲಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಜು.13ರಿಂದ 16ರ ವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ವಾಹನ ಚಾಲಕ ವಿರುದ್ಧ 41 ಪ್ರಕರಣ ದಾಖಲಿಸಿದ್ದು, 4 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.