

ರಮೇಶ ಭಟ್ಟ ಶಹಾಬಾದ್
ನಾಲವಾರ ಹಾಗೂ ವಾಡಿ ವಲಯದಲ್ಲಿ ರೈತರು ಬಿಡಿಗಾಸು ಉಳಿಸುವ ಆಸೆಗೆ ಆರ್ಥಿಕ ಬೆಳೆಯಾದ ಹತ್ತಿ ಬೀಜವನ್ನು ಕಳಪೆ ಮಟ್ಟದಲ್ಲಿ ಖರೀದಿಸಿ, ಈಗ ಬಿತ್ತಿದ ಬೀಜ ಮೊಳಕೆ ಬಾರದೆ ಕಂಗಾಲಾಗಿದ್ದಾರೆ.
ವಾಡಿ ವಲಯದ ಹಲಕರ್ಟಿ, ಕೊಂಚೂರ, ಬಳವಡಗಿ, ಹಲಕರ್ಟಿ, ನಾಲವಾರ ವಲಯದ ತಕರಸಪೇಟ್, ಕೊಲ್ಲೂರ, ನಾಲವಾರ ಸುತ್ತಲಿನ ಗ್ರಾಮಗಳ ರೈತರು ಪ್ರತಿ ಕೆಜಿಯಿಂದ 100, 130 ಉಳಿಸಲು ಹೋಗಿ, ಕಳಪೆ ಮಟ್ಟದ ಹತ್ತಿ ಬೀಜ ಖರೀದಿಸಿದ್ದು, ಬಿತ್ತಿ 15 ರಿಂದ 20 ದಿನವಾದರೂ ಸಣ್ಣ ಮೊಳಕೆ ಕಾಣದಿರುವುದು ರೈತರು ಆತಂಕದಲ್ಲಿದ್ದಾರೆ.
ವಾಡಿ, ನಾಲವಾರ ವಲಯದಲ್ಲಿ ಶೇ.30 ರಿಂದ 35 ಮುಂಗಾರು ಹಂಗಾಮಿನ ಜಮೀನಿನಲ್ಲಿ ರೈತರು ಹತ್ತಿ ಬಿತ್ತಿದ್ದಾರೆ. ಸಾಮಾನ್ಯವಾಗಿ ಹತ್ತು ಪ್ಯಾಕೆಟ್ ಹತ್ತಿ ಬೀಜ ಬಿತ್ತಿದ್ದಲ್ಲಿ, ಕೆಲ ಬೀಜ ಮೊಳಕೆ ಒಡೆಯದೆ ಇರುವದರಿಂದ ಇನ್ನೊಂದು ಪ್ಯಾಕೆಟ್ ಬೀಜವನ್ನು ಮೊಳಕೆ ಒಡೆಯದೆ ಇರುವ ಸ್ಥಳದಲ್ಲಿ ಬಿತ್ತುತ್ತಿದ್ದರು. ಆದರೆ, ಈ ಹಂಗಾಮಿನಲ್ಲಿ ರೈತರು ಬಿತ್ತಿದ್ದ ಬೀಜಗಳಲ್ಲಿ ಶೇ.50 ಮೊಳಕೆ ಬಾರದೆ ಇದ್ದು, ಮೊಳಕೆ ಬಂದ ಬೀಜ ಸಮರ್ಪಕವಾಗಿಲ್ಲ ಎನ್ನುತ್ತಾರೆ ರೈತರು.
ಅಧೋನಿ ಬೀಜದ ಮೋಸ ?
ರೈತರು ಸರ್ಕಾರದ ಬೀಜ ಕೇಂದ್ರಗಳಿಂದ ಬೀಜ ಖರೀದಿಸದೆ, ಅಗ್ರೋ ಕೇಂದ್ರಗಳಲ್ಲಿ ಸಿಗುವ ಬೀಜ ಪ್ರತಿ ಕೆಜಿಗೆ 630 ರಿಂದ 750 ಇರುವದಲ್ಲದೆ ರೈತರು ಅಗ್ರೋ ಕೇಂದ್ರದಲ್ಲಿ ಬೀಜವನ್ನು ಉದ್ರಿ ತಂದರೆ, ಅದಕ್ಕೆ ಪ್ರತಿ ತಿಂಗಳು ಶೇ.2 ಬಡ್ಡಿ ನೀಡಬೇಕಾಗಿದ್ದರಿಂದ ರೈತರು, ವಾಡಿ, ನಾಲವಾರ ವಲಯದಲ್ಲಿ ಹರಡಿರುವ ದಲ್ಲಾಳಿಗಳಿಂದ ರಾಯಚೂರ, ಆಂಧ್ರಪ್ರದೇಶದ ಆದೋನಿಯಿಂದ ಕಂಪನಿ ಬ್ರಾಂಡ್ ಇಲ್ಲದೇ ಇರುವ 500 ರಿಂದ 550 ರೂ. ಪ್ರತಿ ಕೆಜಿ ಬೀಜ ಖರೀದಿಸಿ ಬಿತ್ತಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲವು ನಕಲಿ ಬ್ರಾಂಡ್ ಕಂಪನಿಗಳಿಂದಲೂ ಸಹ ಇಂತಹ ಕಳಪೆ ಬೀಜ ಪೂರೈಸಲಾಗುತ್ತಿದೆ ಎಂದು ರೈತರು ದೂರುತ್ತಾರೆ.
ಅದರೆ, ತಾಲೂಕು ಕೃಷಿ ಇಲಾಖೆಯಿಂದ ಹತ್ತಿ ಬೀಜ ವಿತರಣೆ ಮಾಡದೆ ಇದ್ದು, ರೈತರು ಮಾತ್ರ ತಮಗೆ ತೋಚಿದ ಬೀಜ ಖರೀದಿಸಿ ಮೋಸ ಹೋಗುತ್ತಿದ್ದಾರೆ. ಇದರಿಂದ ತೊಗರಿಗೆ ಪರ್ಯಾಯವಾಗಿ ಹತ್ತಿ ಬೆಳೆ ಬೆಳೆಯುತ್ತಿರುವ ರೈತರು ತಮ್ಮ ತಪ್ಪಿನಿಂದ ಮೋಸ ಹೋಗುತ್ತಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ರೈತರಲ್ಲಿ ಜಾಗೃತಿ ಮೂಡಿಸುವದು ಅವಶ್ಯಕವಾಗಿದೆ.
ಐದು ಎಕರೆಯಲ್ಲಿ ಮೊದಲು 12 ಪ್ಯಾಕೆಟ್ ಬಿತ್ತಿದ್ದೇನೆ, ಮೊಳಕೆ ನಾಟಿಲ್ಲ ಅಂತ ಈಗ ಮತ್ತೆ 12 ಪ್ಯಾಕೆಟ್ ಬೀಜ ಹಾಕಿದ್ದೇನೆ, ಅದು ಕೂಡಾ ನಿರಾಶೆಯಾಗಿದೆ. ಮೂರನೇ ಬಾರಿಗೆ 5 ಪ್ಯಾಕೆಟ್ ಬಿತ್ತಿದ್ದೇನೆ. ಏನಾಗುತ್ತದೆ ನೋಡಬೇಕು.
| ಶಿವುಕುಮಾರ ಮಲ್ಕಂಡಿ ಲಾಡ್ಲಾಪುರ ರೈತ